ಪೌಷ್ಟಿಕ ಆಹಾರದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ: ನ್ಯಾಯಾಧೀಶ ಸಿದ್ದಲಿಂಗ ಪ್ರಭು

ಪೌಷ್ಟಿಕ ಆಹಾರದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ: ನ್ಯಾಯಾಧೀಶ ಸಿದ್ದಲಿಂಗ ಪ್ರಭು  Building a healthy society is possible through nutritious food: Judge Siddalinga Prabhu


ಬಳ್ಳಾರಿ, ಸೆ. 07: ದೇಶಕ್ಕೆ ಆರೋಗ್ಯವಂತ ಸಮಾಜ ಅತ್ಯಗತ್ಯವಾಗಿದ್ದು, ಮಕ್ಕಳ ಹಾಗೂ ಗರ್ಭಿಣಿಯರಲ್ಲಿನ ಅಪೌಷ್ಟಿಕತೆ ನಿವಾರಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸಲು ಎಲ್ಲರೂ ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗ ಪ್ರಭು ಹೇಳಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಜಿಪಂನ ಹಳೆ ನಜೀರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಪೋಷಣ್ ಮಾಸಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಹಿಂದೆ ರಾಜ್ಯಾದ್ಯಂತ ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಗಳನ್ನು ಗುರುತಿಸಿ ಅದನ್ನು ನಿವಾರಿಸಲು ರೂಪಿಸಲಾದ ವಿವಿಧ ಕಾರ್ಯಕ್ರಮಗಳ ಫಲವಾಗಿ ಇಂದು ಮಹತ್ತರ ಪ್ರಗತಿ ಸಾಧಿಸಲಾಗಿದೆ. ಈ ಅಭಿಯಾನದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಪರಿಶ್ರಮ ಅಪಾರವಾಗಿದ್ದು, ಅವರು ಕ್ಷೇತ್ರ ಮಟ್ಟದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

ಮಾನಸಿಕವಾಗಿ ಸದೃಢರಾಗಿದ್ದಾಗ ಮಾತ್ರ ಸರಿತಪ್ಪುಗಳ ವಿವೇಚನೆ ಸಾಧ್ಯ. ಉತ್ತಮ ಆರೋಗ್ಯವಿದ್ದಲ್ಲಿ ರೋಗಗಳಿಂದ ಮುಕ್ತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಮೊಳಕೆ ಕಾಳುಗಳು ಹಾಗೂ ವಿಟಮಿನ್ಯುಕ್ತ ಪೌಷ್ಟಿಕ ಆಹಾರಗಳ ಮಹತ್ವವನ್ನು ಜನರಿಗೆ ತಿಳಿಸುವ ಅಗತ್ಯವಿದೆ. ಗರ್ಭಧಾರಣೆಯ ಮೊದಲ ದಿನದಿಂದ ಮಗುವಿನ ಜನನದವರೆಗೆ ತಾಯಿ ಮತ್ತು ಮಗುವಿಗೆ ಅಗತ್ಯವಾದ ಪೋಷಕಾಂಶಯುಕ್ತ ಆಹಾರ ಒದಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.