ಬೆಣ್ಣೆ ಹಳ್ಳಕ್ಕೆ ಬ್ಯಾರೇಜ್ ನಿರ್ಮಿಸಿ ರೈತರ ಬೆಳೆಹಾನಿ ತಪ್ಪಿಸಿ: ಜಾಯನಗೌಡ್ರ

ಬೆಣ್ಣೆ ಹಳ್ಳಕ್ಕೆ ಬ್ಯಾರೇಜ್ ನಿರ್ಮಿಸಿ ರೈತರ ಬೆಳೆಹಾನಿ ತಪ್ಪಿಸಿ: ಜಾಯನಗೌಡ್ರ Build a barrage on Benne Halla to prevent damage to farmers' crops: Jayana Gowdra

ಗದಗ 27: ಉತ್ತರ ಕರ್ನಾಟಕದ ಹತ್ತಾರು ಹಳ್ಳಗಳು ಸೇರಿ ಬ್ರಹದಾಕಾರದಲ್ಲಿ ಹರಿಯುವ ಬೆಣ್ಣೆ ಹಳ್ಳದ ನೀರಿನಿಂದ ಪ್ರತಿವರ್ಷ ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗುತ್ತಿದ್ದು, ಸರಕಾರ ಬೆಣ್ಣೆ ಹಳ್ಳಕ್ಕೆ ಬ್ಯಾರೇಜ್ ನಿರ್ಮಿಸುವ ಮೂಲಕ ನೀರಿನ ಸದ್ಭಳಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ ಬಣದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಜಾಯನಗೌಡ್ರ ಆಗ್ರಹಿಸಿದರು. 

ತಾಲೂಕಿನ ಸೊರಟೂರ ಗ್ರಾಮದಲ್ಲಿ ನಡೆದ ಗೋಲಿಬಾರ್ ಘಟನೆಯಲ್ಲಿ ಮೃತರಾದ ರೈತ ಹುತಾತ್ಮರ ಗದ್ದುಗೆಗೆ ಪೂಜೆ ನೆರವೇರಿಸಿ, ಶ್ರದ್ದಾಂಜಲಿ ಸಲ್ಲಿಸಿ ಅವರು ಮಾತನಾಡಿ, ರೈತ ಹುತಾತ್ಮರಾದ ಮಹಾಲಿಂಗಪ್ಪ ಗಿಡ್ಡಕೆಂಚಣ್ಣವರ, ಚನ್ನಬಸಪ್ಪ ನಿರ್ವಾಣಶೆಟ್ಟರ, ದೇವಲಪ್ಪ ಲಮಾಣಿ ಅವರನ್ನು ಸ್ಮರಿಸಿದರು. 

ಬೆಣ್ಣೆ ಹಳ್ಳದ ಪ್ರವಾಹ ಸೇರಿದಂತೆ ಅತೀವೃಷ್ಠಿಯಿಂದಾಗಿ ಬೆಳೆ ಹಾನಿಯಾದ ರೈತರಿಗೆ ಸರಕಾರ ಪರಿಹಾರ ಸೇರಿದಂತೆ, ಬೆಳೆವಿಮೆಯ ಹಣವನ್ನು ಕೂಡಲೇ ನೀಡಬೇಕು ಎಂದು ಅವರು ಹೇಳಿದರು. 

ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ರೈತರಿಗೆ ಅಗತ್ಯವಾಗಿರುವ ಬಿತ್ತನೆ ಬೀಜ, ರಸಗೊಬ್ಬರ ಸಮರ​‍್ಕವಾಗಿ ಪೂರೈಸಬೇಕು. ಗೊಬ್ಬರ ಕೊರತೆಯಿಂದ ರೈತರು ಕಂಗಾಲಾಗಿದ್ದು, ಸಿಎಂ ಸಿದ್ದರಾಮಯ್ಯ ರಸಗೊಬ್ಬರ ಕೊರತೆ ಇದೆ ಎಂದು ಕೇಂದ್ರ ಸರಕಾರದ ಮೇಲೆ ಆರೋಪ ಮಾಡುತ್ತಿದ್ದರೆ, ರಾಜ್ಯ ಸಚಿವ ಚಲುವರಾಯಸ್ವಾಮಿ ಅವರು ರಾಜ್ಯದಲ್ಲಿ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದೆ ಎಂದು ಹೇಳುತ್ತಾರೆ. ಇವರಿಬ್ಬರ ನಡುವೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ರಾಜ್ಯ ಸರಕಾರ ರೈತರಿಗೆ ಅಗತ್ಯವಿರುವ ಗೊಬ್ಬರ ವಿತರಿಸಬೇಕು ಎಂದು ಶಂಕರಗೌಡ ಜಾಯನಗೌಡ್ರ ಒತ್ತಾಯಿಸಿದರು. 

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ ಬಣದ ಗದಗ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ರಾಮಣ್ಣ ಕಮ್ಮಾರ ಮಾತನಾಡಿ, ಸೊರಟೂರು ಸೇರಿದಂತೆ ಗದಗ ಜಿಲ್ಲೆಯಲ್ಲಿರುವ ಬಗರಹುಕುಂ ಸಾಗುವಳಿದಾರರಿಗೆ ಜಮೀನು ಹಕ್ಕುಪತ್ರ ನೀಡಬೇಕು ಎಂದರು. 

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ ಬಣದ ಗದಗ ಜಿಲ್ಲಾ ಘಟಕದ ಸಂಚಾಲಕರು, ಸಾಮಾಜಿಕ ಹೋರಾಟಗಾರರಾದ ಬಸವಣ್ಣೆಯ್ಯ ಹಿರೇಮಠ ಅವರು ಮಾತನಾಡಿ, ಸೊರಟೂರು ರೈತ ಹುತಾತ್ಮರ ಹೆಸರಲ್ಲಿ ಸ್ಮಾರಕ ಭವನವನ್ನು ನಿರ್ಮಿಸಬೇಕು ಎಂದರು. 

ಈ ಸಂದರ್ಭದಲ್ಲಿ ರೈತ ಸಂಘದ ಗದಗ ತಾಲೂಕು ಅಧ್ಯಕ್ಷರಾದ ಮಂಜುನಾಥ ಎಂ. ವಡ್ಡರ, ರೈತ ಮುಖಂಡರಾದ ಭದ್ರೇಶ ಕುಸ್ಲಾಪೂರ, ಬೂದಪ್ಪ ಹಳ್ಳಿ, ಚನ್ನವೀರಯ್ಯ ಹೊಸಮಠ, ಶಿವಜೋಗಯ್ಯ ಹಿರೇಮಠ, ಯಲ್ಲಪ್ಪ ಅಡ್ನೂರ, ಮಂಜುನಾಥಸ್ವಾಮಿ ಹಿರೇಮಠ, ಫಕ್ಕೀರೇಶ ಸುಗ್ರಿ, ವೀರೇಶ ಮಾಂಡ್ರೆ, ಮಂಜಣ್ಣ ಬುರ್ಲಿ, ಮುತ್ತಪ್ಪ ಹಟ್ಟಿ, ಮಹಾಂತೇಶ ಹಳ್ಳಿ, ಮಾರುತಿ ಹುಲಿಕಟ್ಟಿ, ವೀರಣ್ಣ ಗುಗ್ಗರಿ, ಹನಮಂತಪ್ಪ ಘೋಡಕೆ, ಕನಕಪ್ಪ ಬೇಗೂರ, ಫಕ್ಕೀರಪ್ಪ ತೋಪಿನ, ಮಲಕಾಜಪ್ಪ ಗಿಡ್ಡಕೆಂಚಣ್ಣವರ, ಪರಶುರಾಮ ಹೂಗಾರ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.