ಅಥಣಿಯಲ್ಲಿ ಬ್ರಾಹ್ಮಣ ಸಮಾಜದ ಪ್ರತಿಭಾ ಪುರಸ್ಕಾರ

ಅಥಣಿಯಲ್ಲಿ ಬ್ರಾಹ್ಮಣ ಸಮಾಜದ ಪ್ರತಿಭಾ ಪುರಸ್ಕಾರ Brahmin community talent award in Athani

 ಅಥಣಿ  29:  ಉನ್ನತ ಸರ್ಕಾರಿ ಹುದ್ದೆಗಳಾದ ಐಎಎಸ್, ಕೆಎಎಸ್, ಐಎಫ್‌ಎಸ್, ಐಆರ್‌ಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಮರ​‍್ಕವಾಗಿ ತಯಾರಿ ನಡೆಸಬೇಕು ಎಂದು ಖ್ಯಾತ ವೈದ್ಯ ಡಾ. ವಿಜಯಕುಮಾರ್ ಚೈನಿ ಕರೆ ನೀಡಿದರು.  

ಅಥಣಿ ಬ್ರಾಹ್ಮಣ ಸಮಾಜ ಟ್ರಸ್ಟ್‌ ವತಿಯಿಂದ ಸ್ಥಳೀಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಸೇವೆಗಳತ್ತ ಆಸಕ್ತಿ ಕಡಿಮೆಯಾಗಿರುವುದು ವಿಷಾದನೀಯ ಎಂದರು.  

ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ನಡೆಸಿದರೆ ಮಾತ್ರ ಉನ್ನತ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗುತ್ತದೆ. ಉತ್ತರ ಭಾರತದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವುದರಿಂದ ಅವರು ಉನ್ನತ ಸರ್ಕಾರಿ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ ಎಂದು ತಿಳಿಸಿದರು.  

ಮುಖ್ಯ ಅತಿಥಿ ಪಂಡಿತ್ ಬಿಂದು ಮಾಧವಾಚಾರ ಜೋಶಿ ಮಾತನಾಡಿ, ಧಾರ್ಮಿಕ ಚಟುವಟಿಕೆಗಳ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಸಮಾಜದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆ ಮಾಡಿ ಸಮಾಜದ ಗೌರವ ಹೆಚ್ಚಿಸಬೇಕು ಎಂದು ಹೇಳಿದರು.  

ಖ್ಯಾತ ನ್ಯಾಯವಾದಿ ಆರ್‌.ಎನ್‌. ಸಿದ್ಧಾಂತಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇಂತಹ ರಚನಾತ್ಮಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.