ಮುಂಬೈ, ಜೂನ್ 30 :-ಜಾಗತಿಕ ಮಾರುಕಟ್ಟೆಗಳ ಚೇತರಿಕೆ ನಡುವೆ ರಿಯಾಲ್ಟಿ, ಬ್ಯಾಂಕಿಂಗ್, ಆಟೋ ಮತ್ತು ಲೋಹ ಷೇರುಗಳಿಗೆ ಉತ್ತಮ ಖರೀದಿ ಬೆಂಬಲ ವ್ಯಕ್ತವಾದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಮಂಗಳವಾರ ಬೆಳಗಿನ ವಹಿವಾಟಿನಲ್ಲಿ 272 ಅಂಕ ಏರಿಕೆ ಕಂಡು 35,233.91 ಕ್ಕೆ ತಲುಪಿದೆ.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 89 ಅಂಕ ಏರಿಕೆ ಕಂಡು 10,401.05 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಕ್ರಮವಾಗಿ ಗರಿಷ್ಠ ಮತ್ತು ಕನಿಷ್ಠ 35,233.91 ಮತ್ತು 35,108.50ರಲ್ಲಿತ್ತು. ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ ಕ್ರಮವಾಗಿ ಗರಿಷ್ಠ ಮತ್ತು ಕನಿಷ್ಠ 10,401.05 ಮತ್ತು 10,365.35ರಲ್ಲಿತ್ತು.ವಲಯ ಸೂಚ್ಯಂಕಗಳಾದ ಲೋಹ, ರಿಯಾಲ್ಟಿ, ಬ್ಯಾಂಕಿಂಗ್ ಮತ್ತು ಆಟೋ ಆರಂಭಿಕ ವಹಿವಾಟಿನಲ್ಲಿ ಮಾರುಕಟ್ಟೆಯನ್ನು ಎತ್ತರಕ್ಕೇರಿಸಿದವು ವೈಯಕ್ತಿಕ ಷೇರುಗಳ ಪೈಕಿ ಟಾಟಾ ಸ್ಟೀಲ್ ತನ್ನ ಮಾರ್ಚ್ ತ್ರೈಮಾಸಿಕ ಫಲಿತಾಂಶಗಳ ಘೋಷಣೆಯ ನಂತರ ಶೇ 3 ಕ್ಕಿಂತ ಏರಿಕೆ ದಾಖಲಿಸಿದೆ. 30 ಕಂಪೆನಿಗಳ ಷೇರುಗಳ ಪೈಕಿ 26 ಏರಿಕೆ ಕಂಡರೆ, 4 ಕುಸಿತ ಕಂಡಿವೆ.ಟಾಟಾ ಸ್ಟೀಲ್, ಆಕ್ಸಿಸ್ ಬ್ಯಾಂಕ್ , ಐಸಿಐಸಿಐ ಬ್ಯಾಂಕ್, ಎನ್‍ಟಿಪಿಸಿ, ಇಂಡಸ್ ಇಂಡ್ ಬ್ಯಾಂಕ್ ಉತ್ತಮ ಲಾಭ ಗಳಿಸಿದವು. ಟಿಸಿಎಸ್, ಸನ್ ಫಾರ್ಮಾ, ಇನ್ಫೋಸಿಸ್ ,ಎಚ್‍ಡಿಎಫ್‍ಸಿ ಬ್ಯಾಂಕ್ ನಷ್ಟಕ್ಕೆ ತುತ್ತಾದವು.ವೊಡಾಫೋನ್ ಐಡಿಯಾ, ಒಎನ್‌ಜಿಸಿ, ಮತ್ತು ಸೈಲ್ ಸೇರಿದಂತೆ ಒಟ್ಟು 596 ಕಂಪನಿಗಳು ಇಂದು ತಮ್ಮ ಮಾರ್ಚ್ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಲಿವೆ.