ಕರ್ನಾಟಕ ಮೂಲದ ವಿ.ಸಿ. ಸಜ್ಜನರ್ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ನೇಮಕ

ಕರ್ನಾಟಕ ಮೂಲದ ವಿ.ಸಿ. ಸಜ್ಜನರ್ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ನೇಮಕ  Born in Karnataka, V.C. Sajjanar appointed as Hyderabad Police Commissioner

ಹೈದರಾಬಾದ 27 : ಕರ್ನಾಟಕ ರಾಜ್ಯಕ್ಕೆ ಸೇರಿದ ಹುಬ್ಬಳ್ಳಿ ಮೂಲದ 1996ನೇ ಬ್ಯಾಚ್ ಐಪಿಎಸ್ ಅಧಿಕಾರಿ ವಿ.ಸಿ. ಸಜ್ಜನರ್ ಅವರನ್ನು ಹೈದರಾಬಾದ್ ನಗರ ಪೊಲೀಸ್ ಆಯುಕ್ತರಾಗಿ ತೆಲಂಗಾಣ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. 

ಅವರು ಆರಂಭದಲ್ಲಿ ಆಂಧ್ರ ಪ್ರದೇಶ ಕ್ಯಾಡರ್‌ಗೆ ಸೇರಿದ್ದು, ರಾಜ್ಯ ವಿಭಜನೆಯ (2014)ನಂತರ ತೆಲಂಗಾಣ ಕ್ಯಾಡರ್‌ಗೆ ಸೇರೆ​‍್ಡಯಾದರು. ಶ್ರೀ ಸಜ್ಜನರ್ ಹುಬ್ಬಳ್ಳಿಯವರಾಗಿದ್ದು, ತಂದೆ ಶ್ರೀ ಸಿ.ಬಿ. ಸಜ್ಜನರ್ ಮತ್ತು ತಾಯಿ ಶ್ರೀಮತಿ ಗಿರಿಜಾ ಸಜ್ಜನರ್‌. ಅವರು ಹುಬ್ಬಳಿಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಿಂದ ಬಿ.ಕಾಂ ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಬಿ.ಎ ಪದವಿ ಪಡೆದಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಮಸೂರಿ) ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (ಹೈದರಾಬಾದ್) ಯಲ್ಲಿ ಪೊಲೀಸ್ ತರಬೇತಿ ಪಡೆದ ಬಳಿಕ ತಮ್ಮ ವೃತ್ತಿಜೀವನ ಆರಂಭಿಸಿದರು. ಪೊಲೀಸ್ ಸೇವೆಯ ಆರಂಭದಲ್ಲಿ ಅವರು ಜಂಗಾಂ (ವಾರಂಗಲ್ ಜಿಲ್ಲೆ) ಮತ್ತು ಪುಳಿವೇಂದ್ರು (ಕಡಪಾ ಜಿಲ್ಲೆ)ಗಳಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ  ಕಾರ್ಯ ನಿರ್ವಹಿಸಿದರು. ನಂತರ ನಾಲ್ಗೊಂಡ, ಕಡಪಾ, ಗುಂಟೂರು, ವಾರಂಗಲ್ ಮತ್ತು ಮೆದಕ್ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದರು. ಇದಲ್ಲದೆ, ಅಪರಾಧ ತನಿಖಾ ವಿಭಾಗದ ಆರ್ಥಿಕ ಅಪರಾಧ ವಿಭಾಗ   ದಾಳಿಕೋರರ ವಿರುದ್ಧದ ಕಾರ್ಯಾಚರಣೆ ವಿಭಾಗದ  ಹಾಗೂ 6ನೇ ಬಟಾಲಿಯನ್ ಆಂಧ್ರ ಪ್ರದೇಶ ವಿಶೇಷ ಪೊಲೀಸ್ ಮಂಗಳಗಿರಿಯ ಕಮಾಂಡಾಂಟ್ ಆಗಿಯೂ ಕೆಲಸ ಮಾಡಿದರು. ಅನಂತರ ಡಿಐಜಿ ಹಾಗೂ ಐಜಿ ಹುದ್ದೆಗಳಿಗೆ ಬಡ್ತಿ ಪಡೆದು ಮಾರ್ಚ್‌ 2018ರವರೆಗೆ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಮಾರ್ಚ್‌ 2018ರಿಂದ ಆಗಸ್ಟ್‌ 2021ರವರೆಗೆ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದರು. ಬಳಿಕ ಸೆಪ್ಟೆಂಬರ್ 2021ರಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. 

ಸಾರಿಗೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತಂದು ನಷ್ಟದಲ್ಲಿದ್ದ ಆರ್‌ಟಿಸಿ ಲಾಭದಾಯಕ ಸಾರಿಗೆ ನಿಗಮವಾಗಿಸಿದ ಕಾರ್ಯದ ಶ್ರೇಯಸ್ಸು ಸಜ್ಜನರ ಅವರಿಗೆ ಸಲ್ಲುತ್ತದೆ. ಇದೀಗ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ  ವಿ.ಸಿ. ಸಜ್ಜನರ್, ಕಾನೂನು-ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲಿದ್ದಾರೆ. ಬರುವ ದಿನಗಳಲ್ಲಿ ತೆಲಂಗಾಣ ರಾಜ್ಯದ ಡಿಜಿಪಿ ಹುದ್ದೆಗೆ ಬಡ್ತಿ ಪಡೆಯಲಿ ಎಂದು ಸಜ್ಜನರ ಅವರ ಅಭಿಮಾನಿಗಳ ಹಾರೈಕೆಯಾಗಿದೆ. ಕಾದು ನೋಡೋಣ.. ನಗರದ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಹಾಗೂ ಉಪಾಧ್ಯಕ್ಷ ಬಸವರಾಜ ಲಾರಾ ನೂತನವಾಗಿ ನೇಮಕಗೊಂಡ ವಿ ಸಿ ಸಜ್ಜನರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.