ಪುಸ್ತಕಗಳು ನಮ್ಮ ಇತಿಹಾಸ ಹಾಗೂ ಸಂಸ್ಕೃತಿಯ ಪ್ರತೀಕ: ಬಸವರಾಜ ಹೊರಟ್ಟಿ

ಪುಸ್ತಕಗಳು ನಮ್ಮ ಇತಿಹಾಸ ಹಾಗೂ ಸಂಸ್ಕೃತಿಯ ಪ್ರತೀಕ: ಬಸವರಾಜ ಹೊರಟ್ಟಿ Books are a symbol of our history and culture: Basavaraja Horatti

ಧಾರವಾಡ 30: ಪುಸ್ತಕಗಳು ನಮ್ಮ ಇತಿಹಾಸ ಹಾಗೂ ಸಂಸ್ಕೃತಿಯ ಪ್ರತೀಕ. ಇಂದು ಜನರು ಪುಸ್ತಕ ಓದುವ ಸಂಸ್ಕೃತಿಯಿಂದ ವಿಮಕರಾಗುತ್ತಿರುವುದು ವಿಷಾದನೀಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘವು,   ಮನೋಜ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ‘ದತ್ತಿ ಉದ್ಘಾಟನೆ ಹಾಗೂ ನರಗುಂದ ಬಾಬಾಸಾಹೇಬ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದತ್ತಿ ಉದ್ಘಾಟಿಸಿ ಹಾಗೂ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, ಮನೋಜ ಪಾಟೀಲ ಪತ್ರಕರ್ತರಾಗಿ, ಪತ್ರಿಕಾ ಸಂಪಾದಕರಾಗಿ ತಮ್ಮ ವೃತ್ತಿ ಜೀವನದಲ್ಲಿ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಅವರು ಬರೆದ ನರಗುಂದ ಬಾಬಾ ಸಾಹೇಬ ಕೃತಿ ಬಾಬಾ ಸಾಹೇಬ ಅವರ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಾಗಿದೆ. ಈ ಕೃತಿ ಓದುಗರಲ್ಲಿ ಖಂಡಿತಾ ಆಸಕ್ತಿ ಕೌತುಕ ಮೂಡಿಸುತ್ತದೆ. ಇಂದು ತಾಯಂದಿರು ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ನಮ್ಮ ಇತಿಹಾಸ ಹಾಗೂ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ಮಾಡಬೇಕೆಂದು ಹೇಳಿದರು. 

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ನರಗುಂದ ಬಾಬಾ ಸಾಹೇಬ ಈ ಕೃತಿ ಅತ್ಯುತ್ತಮವಾಗಿದ್ದು, ಖಂಡಿತ ಓದುಗರಲ್ಲಿ ಆಸಕ್ತಿ ಮೂಡಿಸುತ್ತದೆ. ನಾನು ವಿದೇಶಿ ಪ್ರವಾಸದಲ್ಲಿದ್ದಾಗ ಭಾರತ ಸಂಸ್ಕೃತಿ ಹಾಗೂ ಪರಂಪರೆಯ ಅನೇಕ ಕುರುಹುಗಳನ್ನು ಕಂಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹೋರಾಟದ ಅವಿಸ್ಮರಣೀಯ ಘಟನೆಗಳ ಬಗ್ಗೆ ಅಭಿಮಾನ ಮೂಡಿಸುವ ವ್ಯಾಪಕ ಕಾರ್ಯಕ್ರಮ ಆಯೋಜಿಸಿದ್ದರು ಎಂದರು. 

ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬೀಕಾಯಿ ಮಾತನಾಡಿ, ಮನೋಜ ಪಾಟೀಲರ ಈ ಕೃತಿ ಆಡು ಭಾಷೆಯಲ್ಲಿದ್ದು ಜನಸಾಮಾನ್ಯರಿಗೂ ತಿಳಿಯುವಂತಿದೆ. ಕೃತಿಯಲ್ಲಿ ಭಾಷೆಯ ಪ್ರಭುತ್ವವಿದೆ. ನಮ್ಮ ಸಂಸ್ಥಾನಿಕ ಅರಸರ ಆಡಳಿತೆಗೆ ಸಂಬಂಧಿಸಿದ ಮಾಹಿತಿಯನ್ನು ಇಂಗ್ಲೆಂಡಿಗೆ ಹೋಗಿ ಪಡೆದು ತರಬೇಕಾದ ಪರಿಸ್ಥಿತಿ ನಮ್ಮದಾಗಿರುವುದು ದುರ್ದೈವ. ಇತಿಹಾಸ ಪ್ರಜ್ಞೆ ಇದ್ದಾಗ ದೇಶದ ಬಗ್ಗೆ ಅಭಿಮಾನ ಮೂಡಲು ಸಾಧ್ಯ ಎಂದರು. 

ಪ್ರೊ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕಿ ಸರೋಜಾ ಕುಲಕರ್ಣಿ ನರಗುಂದ ಬಾಬಾ ಸಾಹೇಬರ ಕೃತಿ ಪರಿಚಯಿಸಿದರು.  

ಲೇಖಕರಾದ ಮನೋಜ ಪಾಟೀಲ ‘ನರಗುಂದ ಬಾಬಾ ಸಾಹೇಬರ ಗಲ್ಲು ನಂತರದ ಬದುಕಿನ ಆತಂಕ’ಗಳ ಕುರಿತಂತೆ, ದಾಖಲೆಗಳ ಕುರಿತಂತೆ ಮಾತನಾಡಿದರು.  

ದತ್ತಿ ದಾನಿಗಳು ಗಣ್ಯರನ್ನು ದತ್ತಿ ಪರವಾಗಿ ಸನ್ಮಾನಿಸಿ, ಗೌರವಿಸಿದರು. ಗಾಂಧಿನಗರದ ಕಸ್ತೂರಬಾ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥಿಸಿದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.  

ಕಾರ್ಯಕ್ರಮದಲ್ಲಿ ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಜಿನದತ್ತ ಹಡಗಲಿ, ಮೋಹನ ಹೆಗಡೆ, ಪ್ರಕಾಶ ಉಡಿಕೇರಿ, ಗುರುರಾಜ ಜಮಖಂಡಿ, ಎಂ. ವಾಯ್‌. ಸಾವಂತ ಸೇರಿದಂತೆ ಪಾಟೀಲ ಕುಲಕರ್ಣಿ ಪರಿವಾರದವರು ಇದ್ದರು.