ಬೋಯಿಂಗ್ ವಿಮಾನ ಪತನ ಹಿನ್ನೆಲೆ; ಕಂಪನಿಗೆ ಆರ್ಥಿಕ ನಷ್ಟ

ವಾಷಿಂಗ್ಟನ್, ಜ 30,ಬೋಯಿಂಗ್ 737 ಮ್ಯಾಕ್ಸ್ ಜೆಟ್ ವಿಮಾನದ ಪತನದ ನಂತರ ಕಳೆದ 23 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಕಂಪನಿ ವಾರ್ಷಿಕ ವಹಿವಾಟಿನಲ್ಲಿ ನಷ್ಟ ಎದುರಿಸುತ್ತಿದೆ. 2019ರಲ್ಲಿ 737 ಮ್ಯಾಕ್ಸ್ ವಿಮಾನ ಎರಡು ಬಾರಿ ಪತನಗೊಂಡಿದ್ದು, ನೂರಾರು ಜೀವಗಳ್ನು ಬಲಿತೆಗೆದುಕೊಂಡಿದೆ. ಇದರಿಂದ 1997ರಿಂದ ಇಲ್ಲಿಯವರೆಗೆ ಭಾರಿ ಬೇಡಿಕೆಯ ವಿಮಾನವೆಂದೇ ಗುರುತಿಸಿಕೊಂಡಿದ್ದ ಇದು ಈಗ ಕಂಪನಿಯ ನಷ್ಟಕ್ಕೆ ಕಾರಣವಾಗಿದೆ.  

ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಬೇಕಿದೆ ಎಂದು ಬೋಯಿಂಗ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ಕಾಲ್ಹೋನ್ ಹೇಳಿದ್ದಾರೆ. ಕಳೆದ ವರ್ಷದ ಮಾರ್ಚ್ ನಲ್ಲಿ 737 ಬೋಯಿಂಗ್ ವಿಮಾನದ ಪತನದಲ್ಲಿ 346 ಜನರು ಹತರಾಗಿದ್ದರು. ಇದಕ್ಕೆ ಜೆಟ್ ನ ಪೈಲೆಟಿಂಗ್ ವ್ಯವಸ್ಥೆ ಮತ್ತು ಸುರಕ್ಷಾ ಕ್ರಮಗಳಲ್ಲಿನ ಲೋಪವೇ ಕಾರಣ ಎಂದು ತಿಳಿದುಬಂದಿತ್ತು.

2019ರಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ 1 ಬಿಲಿಯನ್ ಡಾಲರ್ ನಷ್ಟ ಅನುಭವಿಸಿರುವ ಕಂಪನಿ,  737 ಮ್ಯಾಕ್ಸ್ ವಿಮಾನದಿಂದ 9.2 ಬಿಲಿಯನ್ ಡಾಲರ್ ನಷ್ಟ ಸಂಭವಿಸಿರುವುದಾಗಿ ತಿಳಿಸಿದೆ. ನಿರಂತರ ಪತನದಿಂದ ಕಳೆದುಕೊಂಡಿರುವ ಗ್ರಾಹಕರು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಮತ್ತೆ ಗಳಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸುವುದಾಗಿ ಕಾಲ್ಹೋನ್ ಹೇಳಿದ್ದಾರೆ.