“ಒಂದು ದಾನ ಮೂರು ಜೀವ” ರಕ್ತದಾನದ ಸಂದೇಶ ಹರಡಿದ ಡಾ.ತಿವಾರಿ

 “ಒಂದು ದಾನ ಮೂರು ಜೀವ” ರಕ್ತದಾನದ ಸಂದೇಶ ಹರಡಿದ ಡಾ.ತಿವಾರಿ Blood donation camp a success: 30 people donated blood

ರಕ್ತದಾನ ಶಿಬಿರ ಯಶಸ್ವಿ: 30 ಜನರಿಂದ ರಕ್ತದಾನ  

ಮುದ್ದೇಬಿಹಾಳ 11: ರಕ್ತದಾನ ಮಹಾದಾನ ಎನ್ನುವ ಮಾತು ಕೇವಲ ಮಾತಲ್ಲ. ಅದು ಅಕ್ಷರಶಃ ಸತ್ಯ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಸತೀಶ ತಿವಾರಿ ಹೇಳಿದರು.  

ತಾಲೂಕಿನ ಮುದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ, ಹಡಲಗೇರಿಯ ಮಾದರಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ರಾಷ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ರಕ್ತವು ನಮ್ಮ ದೇಹದ ಅತ್ಯಂತ ಅಮೂಲ್ಯವಾದ ಭಾಗ. ರಕ್ತವನ್ನು ಯಾವುದೇ ಕಾರ್ಖಾನೆಯಿಂದ ತಯಾರಿಸಲಾಗುವದಿಲ್ಲ. ಅದು ಮನುಷ್ಯನಲ್ಲಿ ಮಾತ್ರ ಉತ್ಪಾದನೆಯಾಗುತ್ತದೆ. ಅಪಘಾತಗಳಲ್ಲಿ ಗಾಯಗೊಂಡವರು, ಶಸ್ತ್ರಚಿಕಿತ್ಸೆಗೊಳಗಾದವರು, ಗರ್ಭಿಣಿಯರು, ಕ್ಯಾನ್ಸರ್ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದಾಗ ಮತ್ತೊಬ್ಬ ಮನುಷ್ಯನ ದೇಹದಿಂದ ತೆಗೆದ ರಕ್ತವನ್ನು ಹಾಕುವದು ಅನಿವಾರ್ಯ. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯವಾಗಿರುವಾಗ ನಿಯಮಿತವಾಗಿ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದು ಸಮಾಜದ ಜವಾಬ್ದಾರಿಯೂ ಹೌದು. ಒಬ್ಬ ವ್ಯಕ್ತಿ ಕೊಡುವ ಕೇವಲ 350 ಮಿಲಿ ರಕ್ತದಿಂದ 2ಹಿ3 ಜನರ ಜೀವ ಉಳಿಯಲು ಸಹಾಯವಾಗುತ್ತದೆ ಎಂದರು.  

ನ್ಯಾಯವಾದಿ ಚೇತನ ಶಿವಶಿಂಪಿ ಮಾತನಾಡಿ, ಹಲವರು ರಕ್ತದಾನ ಮಾಡುವುದರಿಂದ ದೇಹ ದುರ್ಬಲವಾಗುತ್ತದೆ ಎಂದು ಭಯಪಡುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ರಕ್ತದಾನ ಸಂಪೂರ್ಣ ಸುರಕ್ಷಿತ ಎಂದು ವೈದ್ಯಕೀಯವಾಗಿ ಸಾಬೀತಾಗಿದೆ. ನಮ್ಮ ದೇಹ ಕೆಲವೇ ದಿನಗಳಲ್ಲಿ ಕಳೆದುಕೊಂಡ ರಕ್ತವನ್ನು ಪುನಃ ಉತ್ಪಾದಿಸುತ್ತದೆ ಅಲ್ಲದೇ ರಕ್ತದಾನ ಮಾಡುವುದರಿಂದ ನಮಗೂ ಲಾಭಗಳಿವೆ. ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ, ಆರೋಗ್ಯ ಪರೀಶೀಲನೆ ಆಗುತ್ತದೆ ಮತ್ತು ನಮ್ಮ ಮನಸ್ಸಿಗೆ ಅಪಾರವಾದ ಸಂತೋಷ ಸಿಗುತ್ತದೆ. ಮುಖ್ಯವಾಗಿ ಒಂದು ಜೀವ ಉಳಿಸಲು ಕಾರಣರಾಗಿದ್ದೇವೆ ಎಂಬ ಆತ್ಮತೃಪ್ತಿ ಹೊಂದುತ್ತೇವೆ. ಹಾಗಾಗಿ ಪ್ರತಿಯೊಬ್ಬರೂ ಇಂತಹ ಶಿಬಿರಗಳಲ್ಲಿ ರಕ್ತದಾನ ಮಾಡುವ ಅವಕಾಶಗಳನ್ನು ಕಳೆದುಕೊಳ್ಳಬೇಡಿ ಎಂದರು.  ಎನ್‌.ಎಸ್‌.ಎಸ್‌. ಕಾರ್ಯಕ್ರಮಾಧಿಕಾರಿ ಪ್ರೊ. ರವಿ ಕಟ್ಟಿಮನಿ ಮಾತನಾಡಿ, ಈ ಕಾರ್ಯಕ್ರಮವು ಜಾತಿ, ಮತ, ಧರ್ಮ, ಲಿಂಗ ಭೇಧವಿಲ್ಲದೇ ಮನುಷ್ಯರನ್ನು ಬೆಸೆಯುವ ಕಾರ್ಯಕ್ರಮ. ಇಂತಹ ಅಮೂಲ್ಯವಾದ ಕಾರ್ಯಕ್ರಮದಲ್ಲಿ ಸುಮಾರು 30 ಜನ ರಕ್ತದಾನ ಮಾಡಿದ್ದು ಖುಷಿ ತಂದಿದೆ.  

ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ​‍್ಿಸುವದಾಗಿ ತಿಳಿಸಿದರು. ಕಾಲೇಜಿನ ಸಹ ಪ್ರಾಧ್ಯಾಪಕಿ ಮಹೇಶ್ವರಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಾಧಿಕಾರಿ ಚೆನ್ನಮ್ಮ ಚಿಲಮೂರ, ಅತಿಥಿ ಉಪನ್ಯಾಸಕರುಗಳಾದ ವನಿತಾ ಕಲಾದಗಿ, ಮಹಾಂತೇಶ ಹುಣಶ್ಯಾಳ, ವಿನಯ ಗಡೇದ, ಪ್ರದೀಪ ಜಗ್ಗಲ, ಉಮೇಶ ರಾಠೋಡ, ಮಂಜುನಾಥ ಸಕ್ರೆಪ್ಪಗೋಳ, ಆಡಳಿತ ವೈದ್ಯಾಧಿಕಾರಿ ಡಾ.ಸಂಗಮೆಶ ದಶವಂತ, ಶಾಲೆಯ ಮುಖ್ಯಗುರು ಎಸ್‌.ಎ.ಮೆರೆಖೋರ್, ಸಹ ಶಿಕ್ಷಕಿ ಬಿ.ಎಸ್‌.ಕಡು, ಎಸ್‌.ಡಿ.ಎಂ.ಸಿ ಸದಸ್ಯರಾದ ಅಬ್ದುಲ್‌ರಜಾಕ ನದಾಫ್, ವಿಠ್ಠಲ ನ್ಯಾಯನೇಗಲಿ, ಮಹಾಂತೇಶ ಇಟಗಿ, ಆರೋಗ್ಯ ಇಲಾಖೆಯ ಅನುಸೂಯಾ ತೇರದಾಳ, ಭಾಗ್ಯಶ್ರೀ ಬಿರಾದಾರ, ಮಲ್ಲಿಕಾರ್ಜುನ ಉಗಲವಾಟ, ರೇವಣಸಿದ್ದಪ್ಪ ಅಮ್ಮಣ್ಣಿ, ಅನಿಲ ಡಿಗ್ಗಿ, ಯಲ್ಲಪ್ಪ ಚಲವಾದಿ, ಐ.ಸಿ.ಮಾನಕರ, ಚರಲಿಂಗೇಶ ಬಿದರಕುಂದಿ, ಮಂಜುನಾಥ ಹಡಪದ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗಿಯಾಗಿ ಶಿಬಿರವನ್ನು ಯಶಸ್ವಿಗೊಳಿಸಿದರು ಮಾನವೀಯತೆ ಮೆರೆದರು. 

ರಕ್ತದಾನ ಮಾಡಿ ಪ್ರೇರಣೆಯಾದ ನ್ಯಾಯವಾದಿ ಶಿಬಿರದಲ್ಲಿ  ಚೇತನ ಶಿವಶಿಂಪಿ ಅವರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಹಲವರು ಇನ್ನೂ ರಕ್ತದಾನ ಕುರಿತು ಅಂಜಿಕೆ ಹೊಂದಿರುವ ಸಂದರ್ಭದಲ್ಲಿ, ಅವರು ಮುಂಚೂಣಿಯಾಗಿ ರಕ್ತದಾನ ಮಾಡಿ ಇತರರಿಗೆ ಪ್ರೇರಣೆಯಾದರು. ರಕ್ತದಾನದ ಮಹತ್ವವನ್ನು ಕೇವಲ ಮಾತಿನಲ್ಲಿ ಮಾತ್ರವಲ್ಲದೆ, ಕಾರ್ಯರೂಪದಲ್ಲಿ ತೋರಿಸಿದ ಅವರು, “ರಕ್ತದಾನವು ಮಾನವೀಯ ಸೇವೆಯ ಅತ್ಯುತ್ತಮ ರೂಪ” ಎಂಬ ಸಂದೇಶವನ್ನು ಸಾರಿದರು. ಅವರ ಈ ನಡೆ ಶಿಬಿರದಲ್ಲಿ ಭಾಗವಹಿಸಿದ್ದ ಯುವಕರಲ್ಲಿ ಉತ್ಸಾಹ ಮೂಡಿಸಿದ್ದು, ಇನ್ನಷ್ಟು ಜನರನ್ನು ರಕ್ತದಾನ ಮಾಡಲು ಪ್ರೇರೇಪಿಸಿತು ಇದು ನೀಜವಾದ ಮಾನವೀಯತೆ.