ಲಾಕ್ ಡೌನ್ ನಡುವೆ ಹುಟ್ಟು ಹಬ್ಬ; ಬಿಜೆಪಿ ಕಾರ್ಪೋರೇಟರ್ ಸೇರಿ ೧೧ಮಂದಿ ಬಂಧನ

ಪುಣೆ, ಏಪ್ರಿಲ್ ೧೧, ಲಾಕ್ ಡೌನ್  ದಿಗ್ಬಂಧನ ಜಾರಿಯಲ್ಲಿದ್ದರೂ,  ಹುಟ್ಟು ಹಬ್ಬ ಆಚರಿಸಲು  ಸ್ಥಳವೊಂದರಲ್ಲಿ  ೧೦ಕ್ಕೂ  ಹೆಚ್ಚುಮಂದಿ ಜಮಾಯಿಸಿ   ನಿರ್ಬಂಧ ನಿಯಮಗಳನ್ನು  ಉಲ್ಲಂಘಿಸಿದ  ಆರೋಪದ ಮೇಲೆ  ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪನ್ವೇಲ್ ನಲ್ಲಿ  ಬಿಜೆಪಿ ನಗರ ಪಾಲಿಕೆ ಸದಸ್ಯ ಸೇರಿ  ಹನ್ನೊಂದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಈ ಘಟನೆ  ಶುಕ್ರವಾರ  ರಾತ್ರಿ  ನಡೆದಿದ್ದು,  ಪನ್ವೇಲ್ ಮುನಿಸಿಪಲ್ ಕಾರ್ಪೋರೇಷನ್   ಬಿಜೆಪಿ ಕಾರ್ಪೋರೇಟರ್   ಅಜಯ್ ಬಹಿರಾ ಅವರ ಬಂಗಲೆಯಲ್ಲಿ  ಇವರೆಲ್ಲರೂ  ಸೇರಿ ಹುಟ್ಟು ಹಬ್ಬ ಆಚರಿಸುತ್ತಿದ್ದಾಗ  ಪೊಲೀಸರು ಬಂಧಿಸಿದ್ದಾರೆ.ಹುಟ್ಟು ಹಬ್ಬ ಆಚರಿಸಲು  ಕಾರ್ಪೋರೇಟರ್  ಅಜಯ್ ಬಹಿರಾ  ಅವರ ಬಂಗಲೆ ಛಾವಣಿಯಮೇಲೆ  ಜನರು ಜಮಾವಣೆಗೊಂಡಿದ್ದಾರೆ ಎಂಬ  ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು.  ಸ್ಥಳಕ್ಕೆ ಧಾವಿಸಿ ಕಾರ್ಪೋರೇಟರ್ ಸೇರಿ ೧೧ ಮಂದಿಯನ್ನು  ವಶಕ್ಕೆ ಪಡೆದುಕೊಂಡಿದ್ದಾರೆ.   ದಾಳಿ ನಡೆದಾಗ ಸ್ಥಳದಲ್ಲಿ  ಹುಟ್ಟುಹಬ್ಬ ಸಂಭ್ರಮ ನಡೆಯುತ್ತಿತ್ತು ಎಂದು ಪನ್ವೇಲ್  ಪೊಲೀಸ್ ಠಾಣೆ  ಇನ್ಸ್ ಪೆಕ್ಟರ್ ಅಜಯ್ ಕುಮಾರ್ ಲಾಂಡಗೆ  ತಿಳಿಸಿದ್ದಾರೆ.  ಬಂಧಿತ  ಎಲ್ಲ ೧೧ ಮಂದಿಯ  ವಿರುದ್ದ     ಐಪಿಸಿ ಸೆಕ್ಷನ್ ೧೮೮ ಮತ್ತು ೨೬೯  ಹಾಗೂ ಇನ್ನಿತರ  ಕಾಯ್ದೆಗಳ  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ  ಎಂದು ಪೊಲೀಸರು ತಿಳಿಸಿದ್ದಾರೆ.