ಕಂದಾಯ ಗ್ರಾಮ ಮನೆಗಳಿಗೆ ಅನ್ಯಾಯವಾಗದಂತೆ ಹಕ್ಕು ಪತ್ರ: ಶಾಸಕ ಮಾನೆ

ಕಂದಾಯ ಗ್ರಾಮ ಮನೆಗಳಿಗೆ ಅನ್ಯಾಯವಾಗದಂತೆ ಹಕ್ಕು ಪತ್ರ: ಶಾಸಕ ಮಾನೆ Bill of Rights to prevent injustice to revenue village households: MLA Mane

ಹಾನಗಲ್ 29: ಕಂದಾಯ ಗ್ರಾಮ,ಉಪ ಗ್ರಾಮ ರಚನೆಯ ಸಂದರ್ಭದಲ್ಲಿ ಕೆಲ ಅರಣ್ಯ ಪ್ರದೇಶದಲ್ಲಿ ವಸತಿ ಪ್ರದೇಶ ಬಾಕಿ ಉಳಿದಿದ್ದು, ಅವುಗಳನ್ನು ಬೇಗ ಇತ್ಯರ್ಥ ಪಡಿಸಿ ಬಡವರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅರಣ್ಯ,ಕಂದಾಯ,ಸರ್ವೆ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಂದಾಯ ಗ್ರಾಮ, ಉಪ ಗ್ರಾಮಗಳಿಗೆ ಸಂಬಂಧಿಸಿದಂತೆ ಈಗಾಗಲೇ 2ಇ ಅಧಿಸೂಚನೆಯಾದ ಹಾಗೂ ಬಾಕಿ ಪ್ರಸ್ತಾವನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಕಾಲದೊಳಗೆ ಕ್ರಮ ವಹಿಸಲು ಸೂಚಿಸಿದರು. 

 ಈಗಾಗಲೇ ಅಧಿಸೂಚನೆಗೆ ಪರಿಗಣಿಸಿದ ಕೆಲವು ಜಮೀನುಗಳಿಗೆ ಹೊಂದಿಕೊಂಡಿರುವ ಮನೆಗಳನ್ನು ಬಿಟ್ಟಿರುವ ಬಗ್ಗೆ ದೂರುಗಳಿದ್ದು ಪರೀಶೀಲಿಸಿ, ಅರ್ಹರಿಗೆ ಅನ್ಯಾಯವಾಗದಂತೆ ಕ್ರಮಕ್ಕೆ ಸೂಚಿಸಿದರು. ಬಗರಹುಕುಂ ಸಾಗುವಳಿ ನಮೂನೆ 57 ರಲ್ಲಿ ಸಲ್ಲಿಸಿರುವ ಅರ್ಜಿಗಳಲ್ಲಿ ಕೆಲವು ಅರ್ಹರ ಅರ್ಜಿಗಳನ್ನು ತಿರಸ್ಕರಿಸುವುದಾಗಿ ರೈತರು ಅಳಲು ತೋಡಿಕೊಳ್ಳುತ್ತಿದ್ದು ನಿಯಮಾನುಸಾರ ಮರುಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ 30 ಎಕರೆ ಜಮೀನು ಮಂಜೂರಿ ಮಾಡುವುದು, ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳ ಕಚೇರಿಗಳಿಂದ ಬರುವ ಕಡತಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು, ಗೃಹಲಕ್ಷ್ಮೀ ಯೋಜನೆಯಡಿ ಕೆಲ ಅರ್ಹ ಫಲಾನುಭವಿಗಳಿಗೆ ಜಿ.ಎಸ್‌.ಟಿ. ನಮೂದಾಗಿ ಹಣ ಜಮಾ ಆಗುತ್ತಿಲ್ಲ. ಈ ಕುರಿತು ಸಮಗ್ರ ವರದಿಯನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ಸಲ್ಲಿಸಿ ಅರ್ಹರಿಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು.ಅಪರ ಜಿಲ್ಲಾಧಿಕಾರಿ ನಾಗರಾಜ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅಜೀಜ್ ಶೇಖ, ವಲಯ ಅರಣ್ಯಾಧಿಕಾರಿ ಗೀರೀಶ ಚೌಗಲೆ,ಡಿಡಿಎಲ್‌ಆರ್ ರೂಪಕುಮಾರ ಇದ್ದರು.