ರೈತರೊಂದಿಗೆ ದುರ್ವತ್ರನೆ ತೋರಿದ ಬೇವೂರು ಪೊಲೀಸ್ ಠಾಣೆ ಪಿಎಸ್‌ಐ ಗುರುರಾಜ್‌.ಟಿ ಎತ್ತಂಗಡಿ

ರೈತರೊಂದಿಗೆ ದುರ್ವತ್ರನೆ ತೋರಿದ ಬೇವೂರು ಪೊಲೀಸ್ ಠಾಣೆ ಪಿಎಸ್‌ಐ ಗುರುರಾಜ್‌.ಟಿ ಎತ್ತಂಗಡಿ  Bevur Police Station PSI Gururaj T. transferred for misbehaving with farmers

ಲೋಕದರ್ಶನ ವರದಿ   

ಯಲಬುರ್ಗಾ 22 : ಅನ್ನದಾತನಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೇ ದಬ್ಬಾಳಿಕೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ, ತಾಲೂಕಿನ ಬೇವೂರು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಗುರುರಾಜ್ ಟಿ. ಅವರಿಗೆ ಇಲಾಖೆ ತಕ್ಕ ಶಾಸ್ತಿ ಮಾಡಿ ಅವರನ್ನು ಕೊನೆಗೂ ಎತ್ತಂಗಡಿ ಮಾಡಲಾಗಿದೆ. ವಿಂಡ್ ಫ್ಯಾನ್ ವಿಚಾರವಾಗಿ ರೈತನ ಮೇಲೆ ನಡೆಸಿದ್ದ ದಬ್ಬಾಳಿಕೆಯ ವಿಡಿಯೋ ಜಾಲತಾಣಗಳಲ್ಲಿ ತೀವ್ರ ವೈರಲ್ ಆದ ಬೆನ್ನಲ್ಲೇ, ಬಳ್ಳಾರಿ ವಲಯ ಐಜಿಪಿ ಡಾ. ಪಿ.ಎಸ್‌. ಹರ್ಷ ಅವರು ಈ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ. ಘಟನೆಯ ವಿವರ ಹಾಗೂ ದೌರ್ಜನ್ಯದ ಹಿನ್ನೆಲೆ! ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯೊಂದು ಪವನ ವಿದ್ಯುತ್ ಗೋಪುರ (ವಿಂಡ್ ಫ್ಯಾನ್) ಹಾಗೂ ತಂತಿ ಅಳವಡಿಸುವ ಕಾಮಗಾರಿ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ರೈತರೊಬ್ಬರ ಭೂಮಿ ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವ ವಿಷಯವಾಗಿ ರೈತ ಹಾಗೂ ಕಂಪನಿಯ ನಡುವೆ ಸಣ್ಣ ಮಟ್ಟದ ವಿವಾದ ಮತ್ತು ವಾಗ್ವಾದ ಏರ​‍್ಪಟಟಿತ್ತು. ತನ್ನ ಹಕ್ಕಿಗಾಗಿ ಧ್ವನಿ ಎತ್ತಿದ ರೈತನ ನೆರವಿಗೆ ಬರಬೇಕಾಗಿದ್ದ ಬೇವೂರು ಠಾಣೆಯ ಪಿಎಸ್‌ಐ ಗುರುರಾಜ್ ಟಿ., ಖಾಸಗಿ ಕಂಪನಿಯ ಪರ ವಹಿಸಿ ರೈತನ ಮೇಲೆಯೇ ಅಸಭ್ಯವಾಗಿ ವರ್ತಿಸಿ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಏಕವಚನದಲ್ಲಿ ನಿಂದನೆ! ಸ್ಥಳದಲ್ಲಿ ಉಪಸ್ಥಿತರಿದ್ದ ಮುಖಂಡರ ಮಾತನ್ನು ಕೇಳಿಸಿಕೊಳ್ಳದೆ,  

ಆತನ ಮೇಲೆ ಅಧಿಕಾರ ಪ್ರದರ್ಶನ ಮಾಡಿ, ಎಳೆದಾಡಿ ಏಕವಚನದಲ್ಲಿ ನಿಂದಿಸಿ ದಬ್ಬಾಳಿಕೆ ನಡೆಸಲಾಗಿತ್ತು. ಪೊಲೀಸ್ ಅಧಿಕಾರಿಯ ಈ ದೌರ್ಜನ್ಯದ ಸಂಪೂರ್ಣ ದೃಶ್ಯಾವಳಿಯನ್ನು ಅಲ್ಲಿದ್ದ ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್! ರೈತನ ಮೇಲೆ ಪಿಎಸ್‌ಐ ಗುರುರಾಜ್ ದೌರ್ಜನ್ಯ ಎಸಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಆಗುತ್ತಿದ್ದಂತೆ ಕಾಡ್ಗಿಚ್ಚಿನಂತೆ ವೈರಲ್ ಆಯಿತು. ಕಷ್ಟಪಟ್ಟು ಭೂಮಿ ತಾಯಿಯನ್ನು ನಂಬಿ ಬದುಕುವ ರೈತನಿಗೆ ರಕ್ಷಣೆ ನೀಡುವ ಬದಲು, ಈ ರೀತಿ ಅಮಾನವೀಯವಾಗಿ ನಡೆದುಕೊಂಡ ಅಧಿಕಾರಿಯ ಧೋರಣೆಗೆ ಸಾರ್ವಜನಿಕರು, ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಿಗರ ರಕ್ಷಣೆಗೆ ನಿಲ್ಲಬೇಕಾದ ಪೊಲೀಸರು ಖಾಸಗಿ ಕಂಪನಿಗಳ ಹಿತಾಸಕ್ತಿಗೆ ಮಣೆ ಹಾಕುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದವು.

ತಕ್ಷಣವೇ ಸಂಬಂಧಪಟ್ಟ ಅಧಿಕಾರಿಯ ವರ್ಗಾವಣೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಒತ್ತಡ ಹೇರಿದವು. ಐಜಿಪಿಗೆ ದೂರು! ಘಟನೆಯ ತೀವ್ರತೆಯನ್ನು ಅರಿತ ಸಂತ್ರಸ್ತ ರೈತ ಹಾಗೂ ಸ್ಥಳೀಯ ಮುಖಂಡರು, ಪಿಎಸ್‌ಐ ಗುರುರಾಜ್ ಅವರ ಶಿಸ್ತುಬಾಹಿರ ನಡೆ ಮತ್ತು ದೌರ್ಜನ್ಯದ ಕುರಿತು ಸಾಕ್ಷ್ಯಸಮೇತ ಬಳ್ಳಾರಿ ವಲಯದ ಐಜಿಪಿ ಡಾ. ಪಿ.ಎಸ್‌. ಹರ್ಷ ಅವರಿಗೆ ಅಧಿಕೃತ ದೂರು ಸಲ್ಲಿಸಿದರು. ದೂರಿನಲ್ಲಿ ಪೊಲೀಸ್ ಅಧಿಕಾರಿಯ ಕರ್ತವ್ಯ ಲೋಪ ಹಾಗೂ ರೈತನ ಮೇಲಾದ ಅನ್ಯಾಯವನ್ನು ಸ್ಪಷ್ಟವಾಗಿ ವಿವರಿಸಲಾಗಿತ್ತು. ತಕ್ಷಣ ಕ್ರಮಕ್ಕೆ ಮುಂದಾದ ಐಜಿಪಿ! ದೂರನ್ನು ಗಂಭೀರವಾಗಿ ಪರಿಗಣಿಸಿದ ಐಜಿಪಿ ಡಾ. ಪಿ.ಎಸ್‌. ಹರ್ಷ ಅವರು, ಪ್ರಾಥಮಿಕ ಪರೀಶೀಲನೆ ಹಾಗೂ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಆಧರಿಸಿ ತಕ್ಷಣವೇ ಕ್ರಮಕ್ಕೆ ಮುಂದಾದರು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳದ ಮತ್ತು ಪೊಲೀಸ್ ಇಲಾಖೆಯ ಘನತೆಗೆ ಕುಂದು ತಂದ ಆರೋಪದ ಮೇಲೆ, ಪಿಎಸ್‌ಐ ಗುರುರಾಜ್ ಟಿ. ಅವರನ್ನು ಬೇವೂರು ಠಾಣೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಡಿಸಿಆರಿ​‍್ಬ ಘಟಕಕ್ಕೆ ಸ್ಥಳಾಂತರಿಸಿ ಆದೇಶ ಹೊರಡಿಸಿದ್ದಾರೆ.