ಬೆನ್ ಸ್ಟೋಕ್ಸ್ ಗೆ 'ವರ್ಷದ ಆಟಗಾರ' ಪ್ರಶಸ್ತಿ

ಲಂಡನ್, ಅ 3:  ಆಂಗ್ಲರ ನಾಡಿನಲ್ಲಿ ವೃತ್ತಿಪರ ಕ್ರಿಕೆಟಿಗರಿಗೆ ನೀಡುವ 'ವರ್ಷದ ಆಟಗಾರ' ಪ್ರಶಸ್ತಿಗೆ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಭಾಜನರಾಗಿದ್ದಾರೆ. ಕಳೆದ ಜುಲೈ 14 ರಂದು ನ್ಯೂಜಿಲೆಂಡ್ ವಿರುದ್ಧ ಐಸಿಸಿ ವಿಶ್ವಕಪ್ ಪೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ರೋಚಕ ಜಯ ಸಾಧಿಸುವಲ್ಲಿ ಬೆನ್ ಸ್ಟೋಕ್ಸ್ ಮಹತ್ತರ ಪಾತ್ರವಹಿಸಿದ್ದರು. ಇದರ ಫಲವಾಗಿ ಕ್ರಿಕೆಟ್ ಜನಕರು ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದರು.  ಅಲ್ಲದೇ, ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಸೋಲಿನಿಂದ ಸ್ಟೋಕ್ಸ್ ಪಾರು ಮಾಡಿದ್ದರು. ಮೂರನೇ ಪಂದ್ಯದಲ್ಲಿ ಸ್ಟೋಕ್ಸ್ ಅಜೇಯ 135 ರನ್ ಗಳಿಸಿದ್ದರು. ಅಂತಿಮವಾಗಿ ಆ್ಯಷಸ್ ಸರಣಿ ಡ್ರಾನಲ್ಲಿ ಅಂತ್ಯ ಕಂಡಿತ್ತು. ಆದರೆ, ಕಳೆದ ಆವೃತ್ತಿಯಲ್ಲಿ ಆ್ಯಷಸ್ ಗೆದ್ದಿದ್ದ ಆಸ್ಟ್ರೇಲಿಯಾ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು. ಕಳೆದ ಬೇಸಿಗೆಯಲ್ಲಿ ತಾನು ತೋರಿದ್ದ ಪ್ರದರ್ಶನದಿಂದಾಗಿ ಈ ಬಾರಿ 'ವರ್ಷದ ಆಟಗಾರ' ಪ್ರಶಸ್ತಿ ಪಡೆಯಲು ಅರ್ಹನಾಗಿದ್ದೇನೆ ಎಂದು ಎನಿಸುತ್ತಿದೆ. ಈ ಬಗ್ಗೆ ಮಾತನಾಡಲು ಪದಗಳು ಬರುತ್ತಿಲ್ಲ ಎಂದು ಬೆನ್ ಸ್ಟೋಕ್ಸ್ ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದರು.