15 ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು, ನ.11 :     ಡಿಸೆಂಬರ್ 5ರಂದು ನಡೆಯುವ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದೆ. 

ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದಲ್ಲಿ ಈ ಕ್ಷೇತ್ರಗಳ ಶಾಸಕರ ಸದಸ್ಯತ್ವವನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ್ ರದ್ದುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಈ ಮಧ್ಯೆ ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಇನ್ನಷ್ಟೇ ತೀಪು ಪ್ರಕಟಿಸಿಸಬೇಕಿದೆ. 

ಉಪ ಚುನಾವಣೆ ಆಡಳಿತಾರೂಢ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅತ್ಯಂತ ಮಹತ್ವದ್ದಾಗಿದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾದರೆ 113 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಈಗ ಬಿಜೆಪಿ ಬಳಿ ಕೇವಲ 105 ಶಾಸರಕು ಹಾಗೂ ಓರ್ವ ಪಕ್ಷೇತರ ಶಾಸಕ ಇದ್ದಾರೆ.

ಕಾಂಗ್ರೆಸ್ನ 13, ಜೆಡಿಎಸ್ನ 3, ಓರ್ವ ಪಕ್ಷೇತರ  ಸೇರಿದಂತೆ ಒಟ್ಟು 17 ಮಂದಿ ಶಾಸಕರ ಸ್ಥಾನ ಅನರ್ಹಗೊಂಡ ಬಳಿಕ 14 ತಿಂಗಳ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಕರ್ಾರ ಪತನಗೊಂಡು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 

ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ಒಂದೆರಡು ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. 

ರಾಜ್ಯದಲ್ಲಿ ಉಪಚುನಾವಣೆ ಈ ಮೊದಲು ಅಕ್ಟೋಬರ್ 21ಕ್ಕೆ ನಿಗದಿಯಾಗಿತ್ತು. ಆದರೆ ಸುಪ್ರೀಂಕೋರ್ಟ್ ಆದೇಶದಂತೆ ಚುನಾವಣಾ ಆಯೋಗ ಅದನ್ನು ಮುಂದೂಡಿ ಡಿಸೆಂಬರ್ 5ರಂದು ಚುನಾವಣೆ ನಡೆಸುವುದಾಗಿ ಘೋಷಿಸಿದೆ. ಒಟ್ಟು 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಾಗಿದ್ದರೂ ಎರಡು ಕ್ಷೇತ್ರಗಳ ಈ ಹಿಂದಿನ ಚುನಾವಣಾ ಫಲಿತಾಂಶ ವ್ಯಾಜ್ಯದ ಮೇಲಿನ ಅರ್ಜಿ ಹೈಕೋರ್ಟ್ನ್ಲ್ಲಿ ಇತ್ಯರ್ಥಕ್ಕೆ ಬಾಕಿ ಇರುವುದರಿಂದ ಈ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಚುನಾವಣೆ ಘೋಷಿಸಲಾಗಿದೆ. 

ಕಾಗವಾಡ, ಅಥಣಿ, ಗೋಕಾಕ್, ವಿಜಯನಗರ, ಕೆ.ಆರ್.ಪುರಂ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪೇಟೆ, ಹೊಸಕೋಟೆ, ಹುಣಸೂರು, ಶಿವಾಜಿನಗರ, ಚಿಕ್ಕಬಳ್ಳಾಪುರ, ರಾಣೆಬೆನ್ನೂರು, ಯಲ್ಲಾಪುರ ಮತ್ತು ಹಿರೇಕೆರೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. 

ಈ ಹಿಂದೆ ಅಕ್ಟೋಬರ್ 21ರಂದು ಚುನಾವಣೆ ಘೋಷಣೆಯಾದಾಗ ನಾಮಪತ್ರ ಸಲ್ಲಿಸಿದ್ದ 18 ಅಭ್ಯರ್ಥಿಗಳು ಮತ್ತೊಮ್ಮೆ ನಾಮಪತ್ರ ಸಲ್ಲಿಸಬೇಕಾಗುತ್ತದೆ ಎಂದು ಈಗಾಗಲೇ ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಇನ್ನು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಆದರೆ ಜೆಡಿಎಸ್ ಹಾಗೂ ಬಿಜೆಪಿ ಸುಪ್ರೀಂಕೋರ್ಟ್ ತೀರ್ಪನ್ನು ಕಾಯುತ್ತಿದೆ.