ಉದ್ಯೋಗ ಹುಡುಕುವವರಷ್ಟೇ ಅಲ್ಲ, ಉದ್ಯೋಗ ನೀಡುವ ಮಾಲೀಕರಾಗಿ: ಮುರುಗೇಶ ನಿರಾಣಿ

ಉದ್ಯೋಗ ಹುಡುಕುವವರಷ್ಟೇ ಅಲ್ಲ, ಉದ್ಯೋಗ ನೀಡುವ ಮಾಲೀಕರಾಗಿ: ಮುರುಗೇಶ ನಿರಾಣಿ  Be not just job seekers, but job-providing employers: Murugesh Nirani

ಲೋಕದರ್ಶನ ವರದಿ 

ಜಮಖಂಡಿ, ಆ.30: ಸರ್ಕಾರಿ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳ ಕುರಿತು ಗಮನ ಹರಿಸುವುದರ ಜೊತೆಗೆ, ವಿವಿಧ ಯೋಜನೆಗಳ ಮೂಲಕ ಸ್ವಂತ ಉದ್ಯಮ ಆರಂಭಿಸಿ ಇತರರಿಗೆ ಉದ್ಯೋಗ ನೀಡುವ ಮಾಲೀಕರಾಗಬೇಕು ಎಂದು ಮಾಜಿ ಸಚಿವ ಹಾಗೂ ಉದ್ಯಮಿ ಮುರುಗೇಶ ನಿರಾಣಿ ಹೇಳಿದರು.  

ತಾಲೂಕಿನ ಸಾವಳಗಿ ಗ್ರಾಮದ ಶ್ರೀ ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರ 61ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.  

ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಮೊದಲು ತಮ್ಮ ವಿದ್ಯಾಭ್ಯಾಸ ಹಾಗೂ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕು. ಎಸ್‌ಎಸ್‌ಎಲ್ಸಿ ಉತ್ತೀರ್ಣರಾದವರು ಮುಂದಿನ ಹಂತದ ಪದವಿ ಶಿಕ್ಷಣದತ್ತ ಗಮನ ಹರಿಸಬೇಕು. ಸರಿಯಾಗಿ ಪಾಸಾದರೆ ಮುಂದಿನ ಹಂತಕ್ಕೆ ಹೋಗಲು ಅವಕಾಶ ದೊರೆಯುತ್ತದೆ. ವಿದ್ಯಾಭ್ಯಾಸದಲ್ಲಿ ನಿರ್ಲಕ್ಷ್ಯ ಮಾಡಿದರೆ ಮುಂದಿನ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ತೊಂದರೆಯಾಗಬಹುದು ಎಂದು ಸಲಹೆ ನೀಡಿದರು.  

ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಹಾಗೂ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನಿರಾಶರಾಗದೆ, ಉತ್ತಮವಾಗಿ ಓದಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಭವಿಷ್ಯದಲ್ಲಿ ಸಾಧನೆ ಮಾಡಬೇಕು ಎಂದರು.  

ಉದ್ಯಮಿ ಸಂಗಮೇಶ ನಿರಾಣಿ, ಸುಶೀಲಕುಮಾರ ಬೆಳಗಲಿ, ಸಿ.ಎನ್‌.ಎನ್‌. ನಿರಾಣಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಎಸ್‌. ಮುಲ್ಲಾ, ಮಹಾದೇವ ಸಂತಿವೂರು, ಅನುಪಮಾ ರಾಜು ಕರಾಬೆ, ವಿನೋದ ನ್ಯಾಮಗೌಡ, ರಾಜು ಕರಾಬೆ, ಇರ್ಷಾದ್ ಮುಲ್ಲಾ, ಸುಜಿತ್ ಪಾಟೀಲ, ಸಿದ್ದು ತಳಕೇರಿ, ರಾಜುಗೌಡ ಪಾಟೀಲ, ಬಸವರಾಜ ಪರಮಗೊಂಡ, ಕಾಲೇಜಿನ ಶಿಕ್ಷಕರು ಹಾಗೂ ಶಿಕ್ಷಕಿಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.