ಧಾರವಾಡ : ಇಲ್ಲಿಯ ಆದರ್ಶ ನಗರದಲ್ಲಿ 19 ಜನರಿಗೆ ಡೆಂಗ್ಯೂ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಬಡಾವಣೆ ಜನತೆ ಆತಂಕದಲ್ಲಿ ಜೀವನ ದೂಡುವಂತಾಗಿದೆ.
ಕಳೆದ ಹಲವು ದಿನಗಳಿಂದ ಈ ಬಡಾವಣೆಯಲ್ಲಿ ಡೆಂಗ್ಯೂ ಪತ್ತೆಯಾಗಿದ್ದು, ಈಗಾಗಲೇ ಡೆಂಗ್ಯೂ ಜ್ವರಕ್ಕೆ ತಾನಾಜಿ ಜಾಧವ (70) ಮೃತಪಟ್ಟಿದ್ದರು. ಇದರಿಂದಾಗಿ ಸ್ಥಳೀಯರಲ್ಲಿ ಇನ್ನಷ್ಟು ಭಯಭೀತಿ ಮೂಡಿದೆ.
ಇದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಲಕ್ಷ್ಯತನವೇ ಕಾರಣವಾಗಿದ್ದು, ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಸ್ವಚ್ಛತಾ ಕಾರ್ಯ, ಪುಡಿ ಸಿಂಪರಣೆ ಕಾರ್ಯ ಕೈಗೊಂಡಿಲ್ಲ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಆರೋಗ್ಯ ಇಲಾಖೆಗೆ ದೂರು ನೀಡಿದರೆ, ಅವರು ಶನಿವಾರ ಆದರ್ಶ ನಗರ ಬಡಾವಣೆಗೆ ಆಗಮಿಸಿದ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಸ್ಥಳೀಯರಿಗೆ ಅರಿವು ಮೂಡಿಸುವ ಕೆಲಸ ಮಾಡಿದರು.
ಕಿರಿಯ ಪುರುಷ ಆರೋಗ್ಯಸಹಾಯಕ ಕುಂಬಾರ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸುಮಂಗಲಾ ಬಾಬಜೀ, ಆಶಾ ಕಾರ್ಯಕರ್ತರಾದ ಯಾಸ್ಮೀನ ದೊಡ್ಡಮನಿ, ಮಂಜುಳಾ ಯರಗಟ್ಟಿ, ಶನಾಜ್ ನದಾಫ ಮತ್ತು ಆರೊಗ್ಯ ಇಲಾಖೆಯ ಸಿಬ್ಬಂದಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ, ಅವರಿಗೆ ಡೆಂಗ್ಯೂ ಜ್ವರ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಿದರು.
ಅವರಿಗೆ ಕಾಲನಿ ಹಿರಿಯರಾದ ಮಹದೇವ ಹುಬ್ಬಳ್ಳಿ, ಶಿವಾಜಿ ಶಿಂಧೆ,ತುಕಾರಾಂ ಮಾಣಿಕನವರ ಸಾಥ್ ನೀಡಿದರು.