ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ

ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ Basava Jayanti program from April 15

ಲೋಕದರ್ಶನ ವರದಿ 

ಜಮಖಂಡಿ 27: ನಗರದ ಓಲೆಮಠದ ಆಶ್ರಯದಲ್ಲಿ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ಮತ್ತು ಅಷ್ಟೇ ವಿಜೃಂಭಣೆಯಿಂದ ಏ.15 ರಿಂದ ಏ.20ರ ವರೆಗೆ ಬಸವ ಜಯಂತಿ ಕಾರ್ಯಕ್ರಮ ಹಾಗೂ ಓಲೆಮಠದ ಜಾತ್ರಾಮಹೋತ್ಸವ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಓಲೆಮಠದ ಆನಂದ ದೇವರು ಹೇಳಿದರು. 

ನಗರದ ಓಲೆಮಠದ ಸಭಾಂಗಣದಲ್ಲಿ ನಡೆದ ವಿವಿಧ ಸಮಾಜಗಳ ಮುಖಂಡರ ಹಾಗೂ ಶ್ರೀಮಠದ ಸದ್ಭಕ್ತರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಎಲ್ಲರ ಸಲಹೆ, ಸೂಚನೆಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಏ.15 ರಿಂದ ಏ.19ರ ವರೆಗೆ ದಿನಕ್ಕೊಬ್ಬರಂತೆ ಒಟ್ಟು ಐದು ಜನ ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ ಪ್ರಮುಖ ಪೂಜ್ಯರ ಸಾನ್ನಿಧ್ಯದಲ್ಲಿ ಹಾಗೂ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಬಸವ ತತ್ತ-್ವದ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗುವುದು. ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ ಉಪನ್ಯಾಸ ನೀಡಿಸುವ ಜವಾಬ್ದಾರಿಯನ್ನು ಸ್ಥಳೀಯ ಬಸವ ಕೇಂದ್ರ ಮತ್ತು ಬಸವ ಸಮಿತಿ ವಹಿಸಲಿವೆ. ಪ್ರತಿದಿನದ ಮಹಾಪ್ರಸಾದ ಹಾಗೂ ಉಳಿದೆಲ್ಲ ಇತರ ಸೇವೆಗಳನ್ನು ಗಣ್ಯ ವ್ಯಕ್ತಿಗಳು, ವಿವಿಧ ಸಮಾಜ ಹಾಗೂ ಸಂಘ-ಸಂಸ್ಥೆಗಳು ವಹಿಸಿಕೊಳ್ಳಲಿವೆ ಎಂದರು. 

ಏ.20 ರಂದು ಬೆಳಿಗ್ಗೆ ಬಸವ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಗುವುದು. ಸಸಿಗಳನ್ನು ಹೊತ್ತ ಸುಮಂಗಲೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಬಸವವೃಕ್ಷೊತ್ಸವ ನಡಸಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲಿದ್ದಾರೆ. ಅದೇ ದಿನ ಸಾಯಂಕಾಲ ರಥದಲ್ಲಿ ವಚನ ಕಟ್ಟುಗಳನ್ನಿಟ್ಟು ಭವ್ಯವಾದ ರಥೋತ್ಸವ ಓಲೆಮಠದಿಂದ ಸಾಗಲಿದೆ. ಸಂಜೆ ವೇದಿಕೆಯ ಕಾರ್ಯಕ್ರಮ ಓಲೆಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗುವುದು.  

ವೇದಿಕೆಯ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಪೂಜ್ಯರು, ಗಣ್ಯರು, ಸಾಹಿತಿಗಳು, ಚಿಂತಕರು, ವಿದ್ವಾಂಸರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.