ಗ್ರಾಹಕರು, ಷೇರುದಾರರು, ಸಿಬ್ಬಂದಿ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿ: ರಾಜೇಶ್ವರಿ ಸಣಗೌಡ ದೊಡಗೌಡ್ರ

ಗ್ರಾಹಕರು, ಷೇರುದಾರರು, ಸಿಬ್ಬಂದಿ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿ: ರಾಜೇಶ್ವರಿ ಸಣಗೌಡ ದೊಡಗೌಡ್ರ  Bank's development achieved through the cooperation of customers, shareholders, and staff: Rajeshwar


ನೇಶರಗಿ, ಸೆ. 15: ಗ್ರಾಮೀಣ ಭಾಗದಲ್ಲಿರುವ ಅರ್ಬನ್ ಬ್ಯಾಂಕ್ಗಳ ಅಭಿವೃದ್ಧಿಗೆ ಗ್ರಾಹಕರು, ಷೇರುದಾರರು ಹಾಗೂ ಸಿಬ್ಬಂದಿ ವರ್ಗದ ಸಹಕಾರ ಮತ್ತು ಪರಿಶ್ರಮ ಅತ್ಯಗತ್ಯ. ಎಲ್ಲರ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಬ್ಯಾಂಕಿನ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಸಣಗೌಡ ದೊಡಗೌಡ್ರ ಹೇಳಿದರು.  

ಗ್ರಾಮದ ನೇಶರಗಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನ ಸಭಾಭವನದಲ್ಲಿ ಭಾನುವಾರ ನಡೆದ 2025-26ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.  

ಬ್ಯಾಂಕ್ ಪ್ರಸ್ತುತ 6,941 ಸದಸ್ಯರನ್ನು ಹೊಂದಿದ್ದು, ರೂ. 70.64 ಲಕ್ಷ ಷೇರು ಬಂಡವಾಳ, ರೂ. 6.75 ಕೋಟಿ ಸಾಲ ವಿತರಣೆ ಹಾಗೂ ರೂ. 11.56 ಕೋಟಿ ಠೇವಣಿ ಹೊಂದಿದೆ. 2025-26ನೇ ಸಾಲಿನಲ್ಲಿ ರೂ. 6.35 ಲಕ್ಷ ಲಾಭ ಗಳಿಸಿ ಪ್ರಗತಿಯತ್ತ ಮುನ್ನಡೆದಿದೆ ಎಂದು ಅವರು ತಿಳಿಸಿದರು.  

ಕೃಷಿ, ಉದ್ಯೋಗ ಹಾಗೂ ವ್ಯಾಪಾರವನ್ನು ಅವಲಂಬಿಸಿರುವ ಈ ಭಾಗದ ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಹಕರು ಹಾಗೂ ಷೇರುದಾರರ ಹಿತಕ್ಕಾಗಿ ಬ್ಯಾಂಕ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜೇಶ್ವರಿ ಸಣಗೌಡ ದೊಡಗೌಡ್ರ ಹೇಳಿದರು.  

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಸೋಮಪ್ಪ ಸೋಮಣ್ಣವರ, ಆಡಳಿತ ಮಂಡಳಿ ಸದಸ್ಯರಾದ ಎಸ್‌.ಎಂ. ಪಾಟೀಲ, ಬಾಳಾಸಾಹೇಬ ಆರ್‌. ದೇಸಾಯಿ, ಎಸ್‌.ವೈ. ಪಾಟೀಲ, ನಿಂಗಪ್ಪ ಅರಿಕೇರಿ, ಎಂ.ಎಸ್‌. ಕೂಲಿನವರ, ಎ.ಐ. ಮೊದಗಿ, ಶ್ರೀಮತಿ ಎಂ.ಐ. ಕಳ್ಳಿಬಡ್ಡಿ, ಶ್ರೀಮತಿ ಎಂ.ಬಿ. ಪಾಟೀಲ, ಶ್ರೀಮತಿ ಬಸವನೇಮ್ಮವ್ವ ಲಕ್ಕುಂಡಿ, ರಾಜೇಶ್ವರಿ ಪಾಟೀಲ, ಜಗದೀಶ ಸಾವಂತ್, ವೈ.ಎಲ್‌. ಪಾಟೀಲ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.  

ಗ್ರಾಮದ ಹಿರಿಯರಾದ ಎಂ.ಟಿ. ಪಾಟೀಲ, ಸಿದ್ದಪ್ಪ ಇಂಚಲ, ಸೋಮನಗೌಡ ಪಾಟೀಲ, ಶಂಕರಗೌಡ ದೊಡಗೌಡ್ರ, ವೀರನಗೌಡ ದೊಡಗೌಡ್ರ, ಸಲೀಂ ನದಾಫ್, ಪ್ರದೀಪ ದೊಡಗೌಡ್ರ ಸೇರಿದಂತೆ ಹಿರಿಯರು, ಮುಖಂಡರು, ಷೇರುದಾರರು, ಗ್ರಾಹಕರು, ರೈತರು ಹಾಗೂ ಬ್ಯಾಂಕಿನ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.  

ಬ್ಯಾಂಕಿನ ವ್ಯವಸ್ಥಾಪಕ ಬಸವಂತ ಸೋಮಣ್ಣವರ ಅವರು ಬ್ಯಾಂಕಿನ ಸಮಗ್ರ ವರದಿಯನ್ನು ಮಂಡಿಸಿ ವಿವರಿಸಿದರು. ಶಿಕ್ಷಕ ರಾಜಶೇಖರ ಗೇಜ್ಜಿ ನಿರೂಪಿಸಿದರು. ಮಹಾಂತೇಶ ಕೂಲಿನವರ ವಂದಿಸಿದರು.