ಡಾಕಾ, ಡಿ 16 ಬಾಂಗ್ಲಾದೇಶ
ವಿಮೋಚನೆಯ 49ನೇ ವಾರ್ಷಿಕೋತ್ಸವ ಅಂಗವಾಗಿ ಅಲ್ಲಿನ ಅಧ್ಯಕ್ಷ ಅಬ್ದುಲ್ ಹಮೀದ್ ಮತ್ತು ಪ್ರಧಾನಿ ಶೇಖ್
ಹಸೀನಾ ಅವರು ಸೋಮವಾರ ನಗರದ ಹೊರವಲಯದ ಸವಾರ್ ನಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಲ್ಲಿ ವಿಮೋಚನಾ
ಯುದ್ಧ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.
ಸ್ಮಾರಕದಲ್ಲಿ ಹೂಗುಚ್ಛವಿರಿಸಿದ ನಂತರ 1971ರ ವಿಮೋಚನಾ ಯುದ್ಧದಲ್ಲಿ ಹುತಾತ್ಮರಾದ ಯೋಧರ
ಗೌರವಾರ್ಥ ಅಧ್ಯಕ್ಷರು ಹಾಗೂ ಪ್ರಧಾನಿ ಕೆಲ ನಿಮಿಷ ಮೌನ ಆಚರಿಸಿದರು. ಬಾಂಗ್ಲಾದೇಶದ ಸೇನೆ, ವಾಯುಪಡೆ
ಮತ್ತು ನೌಕಾಪಡೆ ಸೇನಾಧಿಕಾರಿಗಳು ಮತ್ತು ಪಡೆಗಳಿಂದ ಗೌರವವಂದನೆ ಸಲ್ಲಿಸಲಾಯಿತು. ಆಡಳಿತಾರೂಢ ಅವಾಮಿ
ಲೀಗ್‍ನ ಅಧ್ಯಕ್ಷರೂ ಆದ ಶೇಖ್ ಹಸೀನಾ ರಾಷ್ಟ್ರೀಯ ಹುತಾತ್ಮರ ಸ್ಮಾರಕದಲ್ಲಿ ಪಕ್ಷದ ಪರವಾಗಿ ಮತ್ತೊಮ್ಮೆ
ಹೂಗುಚ್ಛವಿರಿಸಿ ಗೌರವ ಸಲ್ಲಿಸಿದರು.ವಿಮೋಚನಾ ಯುದ್ಧದಲ್ಲಿ ವಿಜಯದ ಸಂಕೇತವಾಗಿ ಈ ದಿನವನ್ನು ಬಾಂಗ್ಲಾದೇಶದಲ್ಲಿ
ವಿಜಯ ದಿನವನ್ನು ಆಚರಿಸಲಾಗುತ್ತಿದೆ. 1971ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ವಿಮೋಚನಾ ಯುದ್ಧದಲ್ಲಿ
2 ಲಕ್ಷ ಮಹಿಳೆಯರು ಹಾಗೂ 30ಲಕ್ಷ ಮಂದಿ ಪ್ರಾಣತ್ಯಾಗ ಮಾಡಿದ್ದರು. ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಬುರ್
ರೆಹಮಾನ್ ಅವರ ನಾಯಕತ್ವದಲ್ಲಿ 1971ರ ಇದೇ ದಿನ ಬಾಂಗ್ಲಾದೇಶ ಸ್ವತಂತ್ರ ದೇಶವಾಗಿ ಉದಯಿಸಿತು.