ಬೆಂಗಳೂರು, ಫೆ.24 ,ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಬಿಎನ್ಪಿ)ದ ಪರಿಸರ ಸೂಕ್ಷ್ಮ ವಲಯವನ್ನು ಕುಗ್ಗಿಸಲು ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರಕಾರ ಕೇಂದ್ರ ಪರಿಸರ ಸಚಿವಾಲಯಕ್ಕೆ ಸಲ್ಲಿಸಿದ ಕೋರಿಕೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು ಎಂದು ಬೆಂಗಳೂರು ಪ್ರತಿಷ್ಠಾನ ಒತ್ತಾಯಿಸಿದೆ.ನಮ್ಮ ಬೆಂಗಳೂರು ಪ್ರತಿಷ್ಠಾನದ ಜನರಲ್ ಮ್ಯಾನೇಜರ್ ಹರೀಶ್ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿಗರ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಇದು ವನ್ಯಮೃಗಗಳ ಕಾರಿಡಾರ್ ಮಾತ್ರವಲ್ಲ, ಬೆಂಗಳೂರಿನ ಸಮೀಪದಲ್ಲಿರುವ ಹಸಿರು ವಲಯವೂ ಹೌದು. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು, ಉಷ್ಣತೆಯನ್ನು ಕಾಪಾಡಿಕೊಳ್ಳಲು ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಹಾಗೂ ತನ್ಮೂಲಕ ಬೆಂಗಳೂರು ಪ್ರಜೆಗಳ ಜೀವನಗುಣಮಟ್ಟ ಸುಧಾರಿಸಲು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಅಮೂಲ್ಯಕೊಡುಗೆ ನೀಡುತ್ತಿದೆ ಎಂದು ಹೇಳಿದರು.ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯವನ್ನು 268.96 ಚದರ ಕಿ.ಮೀ. ವಿಸ್ತೀರ್ಣದಿಂದ 168.84 ಚದರ ಕಿ.ಮೀ.ಗೆ ಕುಗ್ಗಿಸಲು ಸರಕಾರ ಮುಂದಾಗಿರುವುದು ದುರದೃಷ್ಟಕರ.
ಸರಕಾರ ಇದಕ್ಕಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪತ್ರ ಬರೆದು ಈ ಸಂಬಂಧ ಅಧಿಸೂಚನೆ ಹೊರಡಿಸಲು ಕೋರಿಕೊಂಡಿದೆ. ಪರಿಸರ ಸೂಕ್ಷ್ಮ ವಲಯ ಬನ್ನೇರು ಘಟ್ಟ ರಾಷ್ಟ್ರೀಯ ಸುತ್ತಲೂ ರಕ್ಷಣಾ ಪದರವಾಗಿ ಕೆಲಸ ಮಾಡುತ್ತಿದೆ. ಇದು ಸಮರ್ಪಕವಾಗಿಲ್ಲದಿದ್ದರೆ ಉದ್ಯಾನ ಚದುರಿ ಹೋಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಪರಿಸರ ಸೂಕ್ಷ್ಮ ವಲಯವನ್ನು ಕುಗ್ಗಿಸುವುದರಿಂದ ಬೆಂಗಳೂರಿಗರ ಆರೋಗ್ಯದ ಮೇಲೆ ನೇರವಾಗಿ ದುಷ್ಪರಿಣಾಮ ಉಂಟಾಗಲಿದೆ. ವನ್ಯಮೃಗಗಳ ಕಾರಿಡಾರ್ಗೂ ಇದು ಧಕ್ಕೆತರಲಿದ್ದು, ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷಕ್ಕೂ ದಾರಿ ಮಾಡಿಕೊಡಲಿದೆ. ಕಾವೇರಿಯನ್ನು ಸೇರಿಕೊಳ್ಳುವ ನೀರಿನ ತೊರೆಗಳೂ ಇದರಿಂದ ನಾಶವಾಗಲಿದೆ. ಶೀಘ್ರದಲ್ಲೇ ನಮ್ಮ ನೀರಿನ ನಲ್ಲಿಗಳೂ ನೀರಿಲ್ಲದೇ ಒಣಗಲಿವೆ.
ಬೆಂಗಳೂರಿನಲ್ಲಿ ಶೇ 25ರಷ್ಟು ಮಕ್ಕಳು ಈಗಾಗಲೇ ಅಸ್ತಮಾದಿಂದ ಬಳಲುತ್ತಿವೆ. ಇನ್ನಷ್ಟು ಮಕ್ಕಳು ಅಸ್ತಮಾಕ್ಕೆ ಬಲಿಯಾಗಬೇಕುಎಂದು ಸರಕಾರ ಬಯಸುತ್ತಿದೆಯೇ? ಎಂದು ಅವರು ಪ್ರಶ್ನಿಸಿದರು.ಸರಕಾರ ಜನರ ದೃಷ್ಟಿಯಿಂದ ‘ವಾಸ್ತವತೆ’ಯನ್ನು ತಿಳಿಯಬೇಕು. ಬದಲಾಗಿ ಪಟ್ಟಭದ್ರ ಹಿತಾಸಕ್ತಿಗಳ ಕಣ್ಣುಗಳಿಂದಲ್ಲ. ಆದರೆ ಸಮಾಜಘಾತುಕ ಶಕ್ತಿಗಳು ಸರಕಾರಕ್ಕೆಇಂಥ ಮೂರ್ಖ ಸಲಹೆಯನ್ನು ನೀಡಿರಬೇಕು. ಬನ್ನೇರುಘಟ್ಟ ಉದ್ಯಾನದ ಸೂಕ್ಷ್ಮ ಪರಿಸರ ವಲಯವನ್ನು ಕುಗ್ಗಿಸುವ ಮೂಲಕ ಈ ಪಟ್ಟಭದ್ರ ಹಿತಾಸಕ್ತಿಗಳು ಅಕ್ರಮ ಸಕ್ರಮಯೋಜನೆ ಜಾರಿಗೊಳಿಸಲು ಬಯಸುತ್ತಿರಬೇಕು. ಇಂಥ ಜನ ವಿರೋಧಿ ಕ್ರಮವನ್ನು ಸರಕಾರ ಎಂದಿಗೂ ಕೈಗೊಳ್ಳಬಾರದು. ಸರಕಾರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನ ಸಲಹೆಗಳಿಗೆ ಮನ್ನಣೆ ನೀಡಬೇಕು. ಜನರ ಆಕಾಂಕ್ಷೆಗಳನ್ನು ಗೌರವಿಸಬೇಕು.
ಪರಿಸರ ಸೂಕ್ಷ್ಮ ವಲಯವನ್ನು ಕುಗ್ಗಿಸುವ ಪ್ರಸ್ತಾವನೆಯನ್ನು ತಕ್ಷಣಕೈ ಬಿಡಬೇಕು. ಬೆಂಗಳೂರಿನ ಮತ್ತು ಅದರ ಮಕ್ಕಳ ಒಳಿತಿಗಾಗಿ ಬನ್ನೇರುಘಟ್ಟ ಉದ್ಯಾನದ 268.96 ಚದರ ಕಿ.ಮೀ. ಸೂಕ್ಷ್ಮ ವಲಯವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಬೆಂಗಳೂರಿನ ಪ್ರಜೆಗಳು ಒತ್ತಾಯಿಸುತ್ತಿವೆ ಎಂದು ಅವರು ಹೇಳಿದರು.“ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ದುರಾಸೆಯ ಲಾಬಿಗೆ ಕೊನೆಯೇ ಇಲ್ಲ. ತಮ್ಮದೇ ಮಕ್ಕಳ ಆರೋಗ್ಯ ಅಪಾಯದಲ್ಲಿದೆ ಎಂಬ ವಾಸ್ತವತೆಯನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರ ದುರಾಸೆಗಾಗಿ ಬೆಂಗಳೂರನ್ನು ಅನಂತವಾಗಿ ವಿಸ್ತರಿಸುವುದು ಸಾಧುವಲ್ಲ. ಬನ್ನೇರುಘಟ್ಟ ಉಳಿಸಿ ಎಂಬ ಬೆಂಗಳೂರಿಗರ ಹೋರಾಟಕ್ಕೆ ನಾವು ಸದಾ ಜೊತೆಯಲ್ಲಿರುತ್ತೇವೆ ಎಂದು ಹರೀಶ್ಕುಮಾರ್ ಹೇಳಿದರು.