ಮೀನುಗಾರ ಕುಟುಂಬದಿಂದ ಬಂದ ಮಂಕಾಳ ವೈದ್ಯರಿಗೆ ಉಪಸಭಾಧ್ಯಕ್ಷ ಸ್ಥಾನ

ಮೀನುಗಾರ ಕುಟುಂಬದಿಂದ ಬಂದ ಮಂಕಾಳ ವೈದ್ಯರಿಗೆ ಉಪಸಭಾಧ್ಯಕ್ಷ ಸ್ಥಾನ  Mankala Vaidya, hailing from a fishing family, gets the Deputy Speaker post

ಕಾರವಾರ 18 : ಮೀನುಗಾರ ಕುಟುಂಬದಿಂದ ಬಂದ, ತಮ್ಮ ವೃತ್ತಿಯಲ್ಲಿಯೂ ಸಕ್ರಿಯರಾಗಿರುವ ಮಂಕಾಳ ವೈದ್ಯ ಅವರನ್ನು ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಸಂತಸದ ಸಂಗತಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.  

ಉಪಸಭಾಧ್ಯಕ್ಷರ ಆಯ್ಕೆಯ ನಂತರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರಿಗೆ ಉಪಸಭಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವುದು ಸಂಪ್ರದಾಯವಾಗಿದೆ. ಆದರೆ ಲೋಕಸಭೆಯಲ್ಲಿ ಇನ್ನೂ ಆ ಸ್ಥಾನ ಖಾಲಿ ಇದೆ. ಈ ಕುರಿತು ನಾವು ಚರ್ಚಿಸಿದ್ದರೂ, ಹೆಚ್ಚಿನ ಒತ್ತಡದ ಹಿನ್ನೆಲೆಯಲ್ಲಿ ಮಂಕಾಳ ವೈದ್ಯರಿಗೆ ಜವಾಬ್ದಾರಿ ನೀಡಲಾಯಿತು ಎಂದು ಹೇಳಿದರು.  

ಮಂಕಾಳ ವೈದ್ಯ ಅವರು ತಮ್ಮ ಆತ್ಮೀಯ ಸ್ನೇಹಿತರಾಗಿದ್ದು, ಅವರ ನಡೆ-ನುಡಿ ಹಾಗೂ ಕುಟುಂಬವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ರಾಜಕೀಯ ಪಯಣ ವಿಶೇಷವಾಗಿದೆ. ಪಕ್ಷೇತರ ಶಾಸಕರಾಗಿ ಆಯ್ಕೆಯಾದ ಬಳಿಕ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಗೆದ್ದಿದ್ದಾರೆ. ಮೀನುಗಾರಿಕೆ ಸಚಿವರಾಗಿ ಮೂರು ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.  

ಮಂಕಾಳ ವೈದ್ಯರ ರಾಜಕೀಯ ಪಯಣ  

ಮಂಕಾಳ ವೈದ್ಯ ಅವರು ಮೀನುಗಾರ ಕುಟುಂಬದಿಂದ ಬಂದವರು. ತಮ್ಮ ವೃತ್ತಿಯಲ್ಲಿಯೂ ಇಂದಿಗೂ ತೊಡಗಿಸಿಕೊಂಡಿದ್ದು, ವಿದ್ಯಾಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ.  

2005ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸ್ಥಳೀಯ ರಾಜಕೀಯದಿಂದ ಮೇಲೇರಿದ ಅವರು, 2013ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾದರು. 2018ರಲ್ಲಿ ಕಾರಣಾಂತರಗಳಿಂದ ಸೋಲು ಕಂಡರೂ, 2023ರಲ್ಲಿ ಮತ್ತೆ ಗೆದ್ದು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.  

ಉಪಸಭಾಧ್ಯಕ್ಷ ಸ್ಥಾನ ದೊರೆತಿರುವುದಕ್ಕೆ ಬೇಸರಿಸಿಕೊಳ್ಳಬೇಡಿ ಎಂದು ಮಂಕಾಳ ವೈದ್ಯರಿಗೆ ಹೇಳಿದ ಶಿವಕುಮಾರ್, ಈ ಸ್ಥಾನದಲ್ಲಿ ಹಿಂದೆ ಕುಳಿತಿದ್ದ ರುದ್ರ​‍್ಪ ಲಮಾಣಿ ಅವರು ಇದೀಗ ಸಚಿವರಾಗಿದ್ದಾರೆ. ಇದೇ ಸ್ಥಾನದಲ್ಲಿ ಕುಳಿತಿದ್ದ ಎಸ್‌.ಎಂ. ಕೃಷ್ಣ ಹಾಗೂ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಹೇಳಿದರು.