15ನೇ ದಿನದತ್ತ ಬಗರ್‌ಹುಕುಂ ರೈತರ ಅಹೋರಾತ್ರಿ ಧರಣಿ: ದಯಾಮರಣಕ್ಕೆ ಮನವಿ ಸಲ್ಲಿಸಲು ರೈತರ ನಿರ್ಧಾರ

15ನೇ ದಿನದತ್ತ ಬಗರ್‌ಹುಕುಂ ರೈತರ ಅಹೋರಾತ್ರಿ ಧರಣಿ: ದಯಾಮರಣಕ್ಕೆ ಮನವಿ ಸಲ್ಲಿಸಲು ರೈತರ ನಿರ್ಧಾರ Bagarhukum farmers' day-night dharna enters 15th day: Farmers decide to file a petition for euthanas

15ನೇ ದಿನದತ್ತ ಬಗರ್‌ಹುಕುಂ ರೈತರ ಅಹೋರಾತ್ರಿ ಧರಣಿ: ದಯಾಮರಣಕ್ಕೆ ಮನವಿ ಸಲ್ಲಿಸಲು ರೈತರ ನಿರ್ಧಾರ 

ಗದಗ  02 :ಜಿಲ್ಲೆಯ ಬಗರ್‌ಹುಕುಂ ರೈತರ ಹೋರಾಟ 15ನೇ ದಿನವೂ ಮುಂದುವರಿದಿದ್ದು, ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರೋಧವಾಗಿ ದಯಾಮರಣಕ್ಕೆ ಮನವಿ ಸಲ್ಲಿಸುವುದಾಗಿ ರೈತರು ಸೋಮವಾರ ನಿರ್ಧರಿಸಿದರು. 

ಜಿಲ್ಲಾಡಳಿತ ಭವನದ ಎದುರು 14 ದಿನಗಳಿಂದ ಉತ್ತರ ಕರ್ನಾಟಕ ಮಹಾಸಭಾ ನೇತೃತ್ವದಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಸೋಮವಾರ ನಡೆದ ರೈತರ ಸಭೆಯಲ್ಲಿ ಸರ್ಕಾರದ "ರೈತ ವಿರೋಧಿ ಧೋರಣೆ"ಗೆ ಖಂಡನೆ ವ್ಯಕ್ತಪಡಿಸಲಾಯಿತು. 

ಜಿಲ್ಲೆಯ ರೈತರು ಬಗರ್‌ಹುಕುಂ ಸಾಗುವಳಿದಾರರು ಹಾಗೂ ನಾಗಾವಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕಾಗಿ ತಮ್ಮ ಜಮೀನುಗಳನ್ನು ಕಳೆದುಕೊಂಡಿರುವುದರಿಂದ, ಸರ್ಕಾರದಿಂದ ತಕ್ಷಣ ನ್ಯಾಯ ದೊರೆಯಬೇಕು ಎಂದು ಆಗ್ರಹಿಸಿದರು. 2023ರಲ್ಲಿ ಇದೇ ರೀತಿಯ ಅಹೋರಾತ್ರಿ ಧರಣಿ ನಡೆದಾಗ ಸಚಿವ ಎಚ್‌.ಕೆ.ಪಾಟೀಲರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಆ ಭರವಸೆ ಕಾಗದದಲ್ಲೇ ಉಳಿದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. 

ಸಭೆಯಲ್ಲಿ ನಿರ್ಧಾರವಾಗಿ ಇನ್ನೂ ಎರಡು ದಿನ ಶಾಂತಿಯುತ ಹೋರಾಟ ಮುಂದುವರಿಸಿ, ಗುರುವಾರ ಜಿಲ್ಲಾಧಿಕಾರಿಗಳಿಗೆ ದಯಾಮರಣಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.  

ಈ ವೇಳೆ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಬಿ.ಎಸ್‌.ಚಿಂಚಲಿ ಮಾತನಾಡಿ, "ನಮ್ಮ ಹೋರಾಟ ಸಂಪೂರ್ಣ ನ್ಯಾಯಯುತ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್‌.ಕೆ.ಪಾಟೀಲರು ರೈತರ ಪರವಾಗಿಲ್ಲದ ನಿಲುವನ್ನು ತಾಳುತ್ತಿದ್ದಾರೆ. 14 ದಿನಗಳಿಂದ ಜಿಲ್ಲೆಯಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದ್ದರೂ ಅವರು ತಿರುಗಿ ನೋಡಿಲ್ಲ. ಇದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ನಾವು ಯಾವುದಕ್ಕೂ ಜಗ್ಗಲ್ಲ, ಬಗ್ಗಲ್ಲ. ಇನ್ನೂ ಎರಡು ದಿನ ಶಾಂತಿಯುತ ಹೋರಾಟ ಮುಂದುವರಿಸುತ್ತೇವೆ. ನಂತರ ಸರ್ಕಾರ ಸ್ಪಂದಿಸದಿದ್ದರೆ ದಯಾಮರಣಕ್ಕೆ ಮನವಿ ಸಲ್ಲಿಸುತ್ತೇವೆ," ಎಂದರು. 

ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ "ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಮಾತಿನಂತೆ ನಡೆದುಕೊಳ್ಳಬೇಕು. ನಮ್ಮ ನ್ಯಾಯಸಮ್ಮತ ಬೇಡಿಕೆಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟದ ರೂಪರೇಷೆ ಬದಲಾಗುತ್ತದೆ. ಯಾವುದೇ ಅಹಿತಕರ ಘಟನೆ ನಡೆದಿದೆ ಅಂದರೆ ಅದರ ಹೊಣೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಮೇಲಿದೆ," ಎಂದು ಎಚ್ಚರಿಕೆ ನೀಡಿದರು. 

ಪ್ರತಿಭಟನಾ ಸ್ಥಳದಲ್ಲಿ ಎನ್‌.ಟಿ. ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ್, ಫಿರೋಜ್ ನಧಾಪ್ ಸೇರಿದಂತೆ ಜಿಲ್ಲೆಯ ಅನೇಕ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.