ಬಡಚಿ ಸಹಕಾರ ಸಂಘಕ್ಕೆ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ

ಬಡಚಿ ಸಹಕಾರ ಸಂಘಕ್ಕೆ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ Badachi Cooperative Society wins District Best Cooperative Society Award

ಅಥಣಿ 23: ಬಡಚಿಯ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 2024 ರ ಸಹಕಾರ ಸಪ್ತಾಹದ ಅಂಗವಾಗಿ ಉತ್ತಮ ಸಹಕಾರ ಸಂಘ ಎಂದು ಪ್ರಶಸ್ತಿ ದೊರಕಿದ್ದು, ಈ ಪ್ರಶಸ್ತಿಗೆ ಸಂಘದ ಆಡಳಿತ ನಿರ್ದೇಶಕ ಮಂಡಳಿ ಸದಸ್ಯರ ಹಾಗೂ ಸದಸ್ಯರ, ಸಿಬ್ಬಂದಿಗಳ ಸಹಕಾರವೇ ಕಾರಣ ಎಂದು ಸಹಕಾರ ಸಂಘದ ಅಧ್ಯಕ್ಷ ಸೈಬಣ್ಣಾ ಕಮತಗಿ ಹೇಳಿದರು. 

ಅವರು ಬಡಚಿಯ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 65 ನೇ ವಾರ್ಷಿಕ ಸರ್ವಸಾಧಾರಣ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘವನ್ನು ಮುನ್ನಡೆಸಿಕೊಂಡು ಹೋಗುವುದು ಅಷ್ಟು ಸುಲಭದ ಕೆಲಸವಲ್ಲ ರೈತರು ಪಡೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು ಇಲ್ಲದೇ ಹೋದಲ್ಲಿ ಆರ್ಥಿಕ ವ್ಯವಹಾರ ಮಾಡುವುದೇ ಕಷ್ಟಕರ ಎಂದ ಅವರು ಇಂತಹ ಸಂಕಷ್ಟದಲ್ಲಿಯೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ಸಹಕಾರದಿಂದ ಸಂಘವನ್ನು ಕಳೆದ 65 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದೇವೆ ಜೊತೆಗೆ 2024 ರಲ್ಲಿ ಉತ್ತಮ ಸಹಕಾರ ಸಂಘ ಎಂದು ಪ್ರಶಸ್ತಿಯನ್ನೂ ಸಹ ಪಡೆದುಕೊಂಡಿರುವುದು ಅಭಿಮಾನದ ಸಂಗತಿ ಎಂದರು. 

ಸದಸ್ಯರು ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ಕಡ್ಡಾಯವಾಗಿ ಇಬ್ಬರು ಜಾಮೀನುದಾರರ ಸಹಿ ಮಾಡಿಸಲೇಬೇಕು ಮತ್ತು ಕೇಂದ್ರದ ಇತ್ತೀಚಿನ ಬದಲಾದ ನಿಯಮದಂತೆ ಸಾಲಗಾರರಷ್ಟೇ ಜಾಮೀನುದಾರರು ಕೂಡ ಜವಾಬ್ದಾರರು ಹೀಗಾಗಿ ಜಾಮೀನುದಾರರು ಯೋಚನೆ ಮಾಡಿ ಸಹಿ ಮಾಡಬೇಕು ಎಂದ ಅವರು ಸಹಕಾರ ಭೀಷ್ಮ, ಶಾಸಕ ಲಕ್ಷ್ಮಣ ಸವದಿಯವರ ಮಾರ್ಗದರ್ಶನದಲ್ಲಿ ಈ ಸಂಘವನ್ನು ಮುನ್ನಡೆಸಿಕೊಂಡು ಬರುತ್ತಿದ್ದೇವೆ ಎಂದರು. 

ಸದಸ್ಯರಿಂದ ಸಹಕಾರ ಸಂಘ 15 ಕೋಟಿಯಷ್ಟು ಠೇವಣಿ ಸಂಗ್ರಹಿಸಿದ್ದು, ಈ ಪೈಕಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಸಾಲದ ರೂಪದಲ್ಲಿ ಹಂಚಿಕೆ ಮಾಡಿ ಇನ್ನೂಳಿದ ಹಣವನ್ನು ರಾಷ್ಟ್ರೀಕೃತ, ಖಾಸಗಿ ಹಾಗೂ ಕೋ. ಆಪ್ ಸೊಸೈಟಿಯಲ್ಲಿ ಠೇವಣಿ ಇಡಲಾಗಿದ್ದು, ಠೇವಣಿದಾರರು ಅವಧಿ ಪೂರ್ವದಲ್ಲಿ ಠೇವಣಿ ಹಣ ಕೇಳಬಾರದು ಒಂದು ವೇಳೆ ಅವಧಿ ಪೂರ್ವ ಕೇಳಿದಲ್ಲಿ ಸಂಘಕ್ಕೆ  ಸಮಸ್ಯೆಯಾಗುತ್ತದೆ ಎಂದು ಹೇಳಿದ ಅವರು ಪ್ರಸಕ್ತ ಸಾಲಿನಲ್ಲಿ ಸಹಕಾರಿ ಸಂಘಕ್ಕೆ 71 ಲಕ್ಷ 91 ಸಾವಿರದಷ್ಟು ಲಾಭವಾಗಿರುವುದು ಸಂತೋಷದ ಸಂಗತಿ ಎಂದರು. 

ಸಂಘದ ಸದಸ್ಯರಿಗೆ ನಮ್ಮ ಸಹಕಾರ ಸಂಘದಲ್ಲಿ ಲಾಕರ್ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ ಅವರು ಸಾಲಗಾರರು ತಾವು ಪಡೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.        ಅಧ್ಯಕ್ಷತೆ ವಹಿಸಿದ್ದ ಸಂಘದ ಹಿರಿಯ ಸದಸ್ಯ ಮಲ್ಲಯ್ಯಾ ಪೂಜಾರಿ ಮಾತನಾಡಿ,  ಸದಸ್ಯರು ಸಂಘದ ಆಢಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದೊಂದಿಗೆ ಸಹಕಾರ ನೀಡಬೇಕು  ಆಗ ಮಾತ್ರ ಸಂಘ ಅಭಿವೃದ್ಧಿಯಾಗುತ್ತದೆ ಎಂದರು.           

ಸಭೆಯಲ್ಲಿ ಉಪಾಧ್ಯಕ್ಷ ಮಹಾದೇವ ಹೊಕ್ಕುಂಡಿ,  ವಿಠ್ಠಲ ಪೂಜಾರಿ, ಯಮನಪ್ಪ ದನದಮನಿ, ದಶರಥ ಜಾಧವ, ಬಸಪ್ಪ ಲೆಂಡೆ, ಮುತ್ತಪ್ಪಾ ಲೆಂಡೆ, ಸದಾಶಿವ ಐಗಳಿ, ರಾಜು ಹಗಲಂಬಿ, ಪರಶುರಾಮ ಲಾಂಡಗೆ, ಅರ್ಜುನ ಬಡಿಗೇರ, ಶ್ರೀಮತಿ ವಿಜಯಾ ಸಾಳುಂಕೆ, ಶ್ರೀಮತಿ ಸುನೀತಾ ಗಡದಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸದಸ್ಯರು, ಸಿಬ್ಬಂದಿಗಳಾದ ಕಲ್ಲಪ್ಪ ಖೋತ, ಮುರುಘೇಶ ನಾಯಿಕ, ಪ್ರಕಾಶ ಆಜೂರ ಉಪಸ್ಥಿತರಿದ್ದರು.