ಬಾಬರಿ ಮಸ್ಜಿದ್: ಶಾಂತಿ ಮತ್ತು ಸಾಮರಸ್ಯಕ್ಕಾಗಿ ಪಾಪ್ಯುಲರ್ ಫ್ರಂಟ್ ಮನವಿ

ಬೆಂಗಳೂರು, ನ.4:   ಬಾಬರಿ ಮಸ್ಜಿದ್ ಭೂ ಒಡೆತನದ ಸುಪ್ರೀಂ ಕೋರ್ಟ್ ತೀರ್ಪುನ ನಂತರ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು ದೇಶದ ಎಲ್ಲಾ ನಾಗರಿಕರು ಮತ್ತು ಸಂಘಟನೆಗಳೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇ.ಅಬೂಬಕರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಇಂದು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ಹಲವು ರೀತಿಯಲ್ಲಿ ನಮ್ಮ ಸಾಮಾಜಿಕ ಸಂರಚನೆಯನ್ನು ಮುರಿದು ಹಾಕಿದ ದಶಕಗಳಷ್ಟು ಹಿಂದಿನ ವಿಚಾರಕ್ಕೆ ಸಂಬಂಧಿಸಿ ದೇಶವು ಮುಂಬರುವ ದಿನಗಳಲ್ಲಿ ಸುಪ್ರೀಂ ಕೋರ್ಟ್ನ್ ತೀರ್ಪನ್ನು ನಿರೀಕ್ಷಿಸುತ್ತಿದೆ. 1992ರಲ್ಲಿ ನಡೆದ ಬಾಬರಿ ಮಸ್ಜಿದ್ ನ ಸಂಪೂರ್ಣ ವಿಧ್ವಂಸಕ ಕೃತ್ಯವು, ನಮ್ಮ ದೇಶದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯದ ತಳಹದಿಗಳ ಮೇಲಿನ ದಾಳಿಯಾಗಿತ್ತು. ಈ ಪ್ರಕರಣದ ಪರ ನ್ಯಾಯವಾದಿಗಳು ಮತ್ತು ದಾವೆದಾರರನ್ನು ಬೆದರಿಸುವ ಪ್ರಯತ್ನಗಳು ಕೋಮುವಾದಿ ಶಕ್ತಿಗಳಿಂದ ಇತ್ತೀಚೆಗೆ ಕೂಡ ನಡೆದವು. ಇದೀಗ ಮುಂಬರುವ ಸುಪ್ರೀಂ ಕೋರ್ಟ್ ತೀರ್ಪುನೊಂದಿಗೆ ಪ್ರಕರಣವು ಸುಖಾಂತ್ಯ ಹಾಗೂ ಶಾಶ್ವತ ಇತ್ಯರ್ಥ ಕಾಣಲಿದೆ. ಇದು ದೇಶದಲ್ಲಿ ಸಹಬಾಳ್ವೆ ಹಾಗೂ ಎಲ್ಲರನ್ನೊಳಗೊಂಡ ಹೊಸ ಯುಗವೊಂದನ್ನು ತೆರೆಯಲಿದೆ ಎಂಬುದು ದೇಶದ ಭರವಸೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ನ್ಯಾಯಕ್ಕೆ ಬದ್ಧತೆಯನ್ನು ತೋರುವಾಗ, ಕಾನೂನಿನ ನಿಯಮ ಮತ್ತು ನ್ಯಾಯಾಂಗದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವುದು ಎಲ್ಲಾ ವರ್ಗಗಳ ಹೊಣೆಗಾರಿಕೆಯಾಗಿರುತ್ತದೆ. ಪ್ರಕರಣದ ತೀಪು ಪರವಾಗಿರಲಿ ಅಥವಾ ವಿರುದ್ಧವಾಗಿರಲಿ ಅತ್ಯಧಿಕ ಆವೇಶದ ಹರ್ಷ ಅಥವಾ ಆಕ್ರೋಶ ವ್ಯಕ್ತಪಡಿಸುವುದರಿಂದ ದೂರವಿರಬೇಕೆಂದು ಅವರು ಎಲ್ಲರೊಂದಿಗೆ ಮನವಿ ಮಾಡಿದ್ದಾರೆ.