ಮುಧೋಳ ಶ್ವಾನಕ್ಕೆ ಬಿಎಸ್‌ಎಫ್ ತರಬೇತಿ

ಮುಧೋಳ ಶ್ವಾನಕ್ಕೆ ಬಿಎಸ್‌ಎಫ್ ತರಬೇತಿ BSF training for Mudhol dog

* ರಾಮ್‌ಪುರದ ನಾಯಿಗಳಿಗೂ ಟ್ರೇನಿಂಗ್ ಽ 

* ನಕ್ಸಲ್ ಕಾರ್ಯಾಚರಣೆಗಳಲ್ಲಿ ಬಳಕೆ 

ವರದಿ: ಸಂತೋಷಕುಮಾರ್ ಕಾಮತ್  

ಮಾಂಜರಿ 28:ಕರ್ನಾಟಕದ ಮುಧೋಳ ಹೌಂಡ್ ಮತ್ತು ಉತ್ತರ ಪ್ರದೇಶದ ರಾಮ್‌ಪುರದ ದೇಸಿ ತಳಿಯ ಒಟ್ಟು 150 ನಾಯಿಗಳಿಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇದೇ ಮೊದಲ ಬಾರಿಗೆ ತರಬೇತಿ ಆರಂಭಿಸಿದೆ. ಭಾರತದ ಪೂರ್ವ ಹಾಗೂ ಪಶ್ಚಿಮ ಭಾಗದ ಗಡಿಗಳಲ್ಲಿ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳುವ ಅಪಾಯಕಾರಿ ಕಮಾಂಡೋ ಕಾರ್ಯಾಚರಣೆಗಳಲ್ಲಿ ಈ ಎರಡು ತಳಿಯ ಶ್ವಾನ ಬಳಸಿಕೊಳ್ಳುವುದು ತರಬೇತಿಯ ಉದ್ದೇಶ. ಮಧ್ಯಪ್ರದೇಶದ ಟೆಕಾನ್ಸುರದಲ್ಲಿರುವ ಬಿಎಸ್‌ಎಫ್‌ನ ರಾಷ್ಟ್ರೀಯ ತರಬೇತಿ ಕೇಂದ್ರಕ್ಕೆ 2018ರಲ್ಲಿ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ದೇಸಿ ಶ್ವಾನ ತಳಿಗಳನ್ನು ಸೇನೆಯಲ್ಲಿ ನಿಯೋಜಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಅದರನ್ವಯ ದೇಸಿ ಶ್ವಾನ ತಳಿಗಳ ಅನ್ವೇಷಣೆಗೆ ಬಿಎಸ್‌ಎಫ್ ಯೋಜನೆ ರೂಪಿಸಿತ್ತು. ಅಂತಿಮವಾಗಿ, ಮುಧೋಳ ಹೌಂಡ್, ರಾಮ್ ಪುರದ ಶ್ವಾನಗಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. 

ಕ್ರಿಸ್ತಪೂರ್ವ ಇತಿಹಾಸ: ಮುಧೋಳ ಶ್ವಾನ ಕ್ರಿ.ಪೂ.500ರಲ್ಲೇ ಇತ್ತು ಎನ್ನಲಾಗಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ಭಾಗದಲ್ಲಿ ಈ ಹೌಂಡ್ ಕಂಡು ಬರುತ್ತಿತ್ತು. ರಾಜ ಮಹಾರಾಜರ ಕಾಲದಲ್ಲಿ ಈ ಶ್ವಾನವನ್ನು ರಕ್ಷಣೆಗಾಗಿ ಬಳಸುತ್ತಿದ್ದರಂತೆ. ಮುಧೋಳದ ಮಾಲೋಜಿರಾವ್ ಘೋರೆ​‍್ಡ ಮುಧೋಳ ಹೌಂಡ್ ಅನ್ನು ಹೆಚ್ಚು ಪ್ರಚುರಪಡಿಸಿದ್ದರು. ಸದ್ಯ ಮುಧೋಳ ತಾಲೂಕಿನ ತಿಮ್ಮಾಪುರದಲ್ಲಿ ಶ್ವಾನ ಸಂವರ್ಧನ ಕೇಂದ್ರ ಇದೆ. 

ಮನ್ ಕೀ ಬಾತ್‌ನಲ್ಲೂ ಪ್ರಶಂಸೆ 

ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್‌ನಲ್ಲೂ ಮುಧೋಳ ಶ್ವಾನದ ಗುಣಗಾನ ಮಾಡಿದ್ದರು 'ಆತ್ಮನಿರ್ಭರ ಭಾರತದಲ್ಲಿ ಜನರು ತಮ್ಮ ಮನೆಗಳಲ್ಲಿ ನಾಯಿಗಳನ್ನು ಸಾಕಬೇಕು ಎಂದು ಬಯಸಿದರೆ ಮುಧೋಳ ಸೇರಿದಂತೆ ದೇಸಿ ತಳಿಗಳನ್ನು ತರಬೇಕು' ಎಂದು 2020ರಲ್ಲಿ ಮೋದಿ ಕರೆ ನೀಡಿದ್ದರು. ಇದಾದ ಬಳಿಕ ಮುಧೋಳ ಶ್ವಾನದ ಬೇಡಿಕೆ ಮತ್ತಷ್ಟು ಮಗದಷ್ಟು ಹೆಚ್ಚಾಗಿತ್ತು. 

ಅಂದೂ ಇಂದೂ ದೇಶಸೇವೆಯಲ್ಲಿ 

ಶಿವಾಜಿ ಮಹಾರಾಜರು ಸಹ ತಮ್ಮ ಸೇನೆಯಲ್ಲಿ ಈ ನಾಯಿಯನ್ನು ಬಳಸಿದ್ದರಂತೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಡಗಲಿ ಬೇಡರ ಜೊತೆಗೆ ಈ ಶ್ವಾನಗಳು ಭಾಗಿ ಆಗಿದ್ದವಂತೆ. ಇತ್ತೀಚಿನ ವರ್ಷಗಳಲ್ಲಿ ಮುಧೋಳ ಹೌಂಡ್ ಸೇವೆ ಭಾರತೀಯ ಸೇನೆಯಲ್ಲೂ ಮುಂದುವರಿಯುತ್ತಿದೆ. ಸೇನೆಯ ಜತೆಗೆ ಸಶಸ್ತ್ರ ಸೀಮಾಬಲ ರಾಜಸ್ತಾನ, ಬೆಂಗಳೂರು ಸಿಆರ್‌ಪಿಎಫ್, ಶ್ರೀ ಹರಿಕೋಟಾದ ಸಿಐಎಸ್‌ಎಫ್ ಸೇರಿ ವಿವಿಧ ಕಡೆಗೆ ಮುಧೋಳ ಹೌಂಡ್ ಕಳುಹಿಸಿಕೊಡಲಾಗಿತ್ತು 

ಮುಧೋಳ ವಿಶೇಷ  

ಸಣಕಲು ದೇಹ, ಕೋಲು ಮುಖ, ಉದ್ದನೆಯ ಕಾಲು ಮುಧೋಳ ನಾಯಿಯ ವಿಶೇಷ. ಮುಖ್ಯವಾಗಿ ಮುಧೋಳ ಶ್ವಾನಕ್ಕೆ ಭಾರತೀಯ ಸೇನೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಆಯ್ಕೆ ಆಗಲು ಶ್ರಮಿಸಿದ್ದು ಡಾ. ಸುರೇಶ್ ಹೊನ್ನಪ್ಪಗೋಳ ಎನ್ನುವ ಹಿರಿಯ ಅಧಿಕಾರಿ. ಕರ್ನಾಟಕದವರೇ ಆಗಿರುವ ಅವರು ಕೆಲ ವರ್ಷ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದಲ್ಲಿ ಸೇವೆಯಲ್ಲಿದ್ದರು. ಅವರು ಮುಧೋಳ ಶ್ವಾನದ ಬಗ್ಗೆ ಹೆಚ್ಚು ಪ್ರಚಾರಮಾಡಿದ್ದರು.