ರಾಹುಲ್ ಗಾಂಧಿ ವಿರುದ್ಧ ಶನಿವಾರ ದೇಶಾದ್ಯಂತ ಬಿಜೆಪಿ ಪ್ರತಿಭಟನೆ

ನವದೆಹಲಿ, ನ, 15 :      ಪ್ರಧಾನಿ ನರೇಂದ್ರ ಮೋದಿ ಸರಕಾರದ  ವಿರುದ್ದ  ರಫೇಲ್ ಯುದ್ಧ ವಿಮಾನಗಳ  ಖರೀದಿ ಒಪ್ಪಂದದಲ್ಲಿ  ಸುಳ್ಳು ಆರೋಪ ಮಾಡಿದ್ದ  ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ವಿರುದ್ಧ ಶನಿವಾರ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಜನತಾ ಪಕ್ಷ ತಿಳಿಸಿದೆ. 

 ರಫೇಲ್ ವಿಚಾರದಲ್ಲಿ ದೇಶದ ಜನರ ದಿಕ್ಕುತಪ್ಪಿಸಲು ಯತ್ನಿಸಿದ್ದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ನಾಳೆ ದೆಹಲಿಯ ಕಾಂಗ್ರೆಸ್ ಪಕ್ಷದ ಕಚೇರಿಯ ಮುಂಭಾಗದಲ್ಲಿ,  ದೇಶದ ವಿವಿಧೆಡೆ ಬಿಜೆಪಿ ಪ್ರತಿಭಟನೆ ನಡೆಸಲಿದೆ.  

ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಇದನ್ನು ಬಿಜೆಪಿ ವಿರುದ್ಧ ಅಸ್ತ್ರವಾಗಿಸಿಕೊಳ್ಳಲು ಪ್ರಯತ್ನಿಸಿತ್ತು,ಈ ಒಪ್ಪಂದದಲ್ಲಿ  ಯಾವುದೇ ಅವ್ಯವಹಾರ ನಡೆದಿಲ್ಲ ಹೊಸ ತನಿಖೆ ಬೇಕಿಲ್ಲ  ಎಂದು  ಸುಪ್ರೀಂಕೋರ್ಟ್ ಗುರುವಾರ ಮತ್ತೊಮ್ಮೆ ಕ್ಲೀನ್ ಚಿಟ್ ನೀಡಿ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತ್ತು.  

ಅಲ್ಲದೇ ಕಾವಲುಗಾರನೇ ಕಳ್ಳ ಎಂದು ಸುಪ್ರೀಂಕೋರ್ಟ್ ಹೆಸರು ಬಳಸಿ ಮೋದಿ ವಿರುದ್ಧ ಆರೋಪ ಮಾಡಿದ್ದ   ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡುವಾಗ ಎಚ್ಚರ, ಜಾಗ್ರತೆ ವಹಿಸಬೇಕು ಎಂದೂ ತಾಕೀತು ಮಾಡಿತ್ತು.