ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ  BJP protests demanding declaration of drought-hit area


ಯರಗಟ್ಟಿ 16: ಅವಳಿ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ತಾಲೂಕಿನಲ್ಲಿ ಶೇ.25ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೊರತೆಯಾಗಿದೆ. ಇದರಿಂದ ಬೆಳೆಗಳು ಸಂಪೂರ್ಣವಾಗಿ ಒಣಗಿದ್ದು, ಕಾಳು ಕಟ್ಟುವ ಹಂತದಲ್ಲಿದ್ದ ಹೆಸರು, ಉದ್ದು, ಗೋವಿನಜೋಳ ಸೇರಿದಂತೆ ಹಲವು ಬೆಳೆಗಳು ಹಾಳಾಗಿವೆ. ಶೇಂಗಾ, ಸೋಯಾ ಹಾಗೂ ಹತ್ತಿ ಬೆಳೆಗಳಿಗೂ ಹಾನಿಯಾಗಿದೆ ಎಂದರು. 

ಬಿತ್ತನೆ ಹಾಗೂ ಬೆಳೆ ನಿರ್ವಹಣೆಗೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದು, ಇದೀಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಅರಿಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮಂಡಳ ಉಪಾಧ್ಯಕ್ಷರಾದ ಮಹಾಂತೇಶ ಗೋಡಿ ಹಾಗೂ ಸಂಜುಕುಮಾರ ನವಲಗುಂದ ಮಾತನಾಡಿ, ರೈತರ ಸಂಕಷ್ಟವನ್ನು ಪರಿಗಣಿಸಿ ವೈಜ್ಞಾನಿಕವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ,

ಸೂಕ್ತ ಪರಿಹಾರ ಕಲ್ಪಿಸಬೇಕು. ಗೋಶಾಲೆಗಳನ್ನು ತೆರೆಯಬೇಕು. ಕುಡಿಯುವ ನೀರು ಹಾಗೂ ಮೇವಿನ ಕೊರತೆಯಾಗದಂತೆ ತೀವ್ರ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು. ಪಟ್ಟಣದ ಮಹಾಂತ ದುರುದುಂಡೇಶ್ವರ ಮಠದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಾಗೇವಾಡಿ ಚೌಕ್, ಗಾಂಧಿ ವೃತ್ತದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ತಲುಪಿತು. ಅಲ್ಲಿ ಮಾನವ ಸರಪಳಿ ನಿರ್ಮಿಸಿ, ಟೈರ್ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.  

ರಾಮದುರ್ಗ ಮಂಡಳ ಅಧ್ಯಕ್ಷ ಡಾ. ಕೆ.ವಿ. ಪಾಟೀಲ, ಬಿಜೆಪಿ ಮಂಡಳ ಉಪಾಧ್ಯಕ್ಷರಾದ ಮಹಾಂತೇಶ ಗೋಡಿ, ಸಂಜುಕುಮಾರ ನವಲಗುಂದ, ತಾಪಂ ಮಾಜಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಈರಣ್ಣ ಚಂದ್ರಗಿ, ವೆಂಕಟೇಶ ದೇವರಡ್ಡಿ, ಗೌಡಪ್ಪ ಸವದತ್ತಿ, ವೆಂಕಣ್ಣ ಹುರುಕನವರ, ಚೇತನ ಜಕಾತಿ, ಕೃಷ್ಣಮೂರ್ತಿ ತೋರಗಲ್ಲ, ಮಹಾಂತೇಶ ಚನ್ನಗೌಡರ, ಆನಂದ ಅತ್ತೂಗೋಳ, ಮಹಾದೇವ ಮುರಗೋಡ, ಈರಣ್ಣ ವೀರಶೆಟ್ಟಿ, ಆನಂದ ಬಾಗೇಡಿ, ಸದಾನಂದ ಪಾಟೀಲ, ಕುಮಾರ ಹಿರೇಮಠ, ಬಸವರಾಜ ಕಟ್ಟಿಮನಿ, ಶಿವಾನಂದ ಪಟ್ಟಣಶೆಟ್ಟಿ, ಚಂದ್ರ​‍್ಪ ಹೊಸಮನಿ, ಪಂಚು ಪಂಚಣ್ಣವರ, ಶಂಕರ ದಂಡೈನವರ, ಚಂದ್ರಶೇಖರ ಸವದತ್ತಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.