ಮುದ್ದೇಬಿಹಾಳವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಬಿಜೆಪಿ ಆಗ್ರಹ

ಮುದ್ದೇಬಿಹಾಳವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಬಿಜೆಪಿ ಆಗ್ರಹ BJP demands declaration of Muddebihal as drought-hit area

ಮುದ್ದೇಬಿಹಾಳ 31 : ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕರು ಎಂದು ಹೇಳಿಕೊಳ್ಳುವ ‘ಪಪ್ಪು’ಗೆ ಏನು ಗೊತ್ತು ಒಂದು ಕಡೆ ಆಲೂಗಡ್ಡೆ ಬಿತ್ತಿದರೆ ಮತ್ತೊಂದು ಕಡೆ ಚಿನ್ನ ಬೆಳೆಯುತ್ತದೆ ಎಂಬುದಷ್ಟೇ ಅವರಿಗೆ ಗೊತ್ತಿದೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್. ರವಿಕುಮಾರ ಲೇವಡಿ ಮಾಡಿದರು. ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬರ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ರೈತರ ಅಹವಾಲು ಆಲಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಮುದ್ದೇಬಿಹಾಳ ತಾಲೂಕಿನ ಎರಡೂ ಬದಿಗಳಲ್ಲೂ ಜಲಾಶಯಗಳಿದ್ದರೂ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಕುರಿತು ಪ್ರಶ್ನಿಸಿದಾಗ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವುದು ವಿಪರ್ಯಾಸ. ಕೃಷ್ಣಾ ನದಿಯಿಂದ ಈ ಭಾಗದ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವುದರ ಜೊತೆಗೆ, ಬರದಿಂದ ಹಾನಿಗೊಳಗಾದ ರೈತರಿಗೆ ಮೊದಲ ಹಂತದಲ್ಲಿ ಎಕರೆಗೆ ₹50 ಸಾವಿರ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು. ಮುದ್ದೇಬಿಹಾಳ ತಾಲೂಕನ್ನು ಬರಪೀಡಿತವೆಂದು ಘೋಷಿಸಿ  ನಡಹಳ್ಳಿ: ಮಳೆಯ ಕೊರತೆಯಿಂದ ತಾಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುದ್ದೇಬಿಹಾಳ ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು.

ತಾಲೂಕಿನ ವಿವಿಧೆಡೆ ಮಳೆ ಕೈಕೊಟ್ಟಿರುವ ಪರಿಣಾಮ ಬೆಳೆಗಳು ಹಾನಿಗೊಳಗಾಗುವ ಆತಂಕ ಎದುರಾಗಿದೆ. ರೈತರು ಬಿತ್ತನೆ, ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಹಣ ಹೂಡಿಕೆ ಮಾಡಿದ್ದಾರೆ. ಆದರೆ ಮಳೆಯ ಅಭಾವದಿಂದ ಬೆಳೆ ಕೈಕೊಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಕೂಡಲೇ ಅಧಿಕಾರಿಗಳು ತಾಲೂಕಿನಲ್ಲಿ ಸಮಗ್ರ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು. ವಾಸ್ತವಿಕ ಹಾನಿಯ ಪ್ರಮಾಣವನ್ನು ದಾಖಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಅರ್ಹ ರೈತರಿಗೆ ಯಾವುದೇ ವಿಳಂಬವಿಲ್ಲದೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ನಡಹಳ್ಳಿ ಒತ್ತಾಯಿಸಿದರು.

ಇದಕ್ಕೂ ಮೊದಲು ಐತಿಹಾಸಿಕ ಕುಂಟೋಜಿ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬೆಳಗಾವಿ, ಧಾರವಾಡ, ವಿಜಯಪುರ ಹಾಗೂ ಅಥಣಿ ಜಿಲ್ಲೆಗಳ ಬರ ಪರಿಸ್ಥಿತಿ ಅಧ್ಯಯನ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಯುವ ರೈತನ ಕಣ್ಣೀರಿನ ಅಳಲು: “ನಾನು ವಿದ್ಯಾವಂತ  ನೌಕರಿ ಮಾಡುವುದಕ್ಕಿಂತ ಕೃಷಿ ಮಾಡಬೇಕು ಎಂಬ ಉದ್ದೇಶದಿಂದ ನಮ್ಮ ತಾತ ನೀಡಿದ ಜಮೀನಿನಲ್ಲಿ ಕೃಷಿ ಆರಂಭಿಸಲು ₹2 ಲಕ್ಷ ಹೂಡಿಕೆ ಮಾಡಿದ್ದೇನೆ. ಆದರೆ ಮಳೆ ಬಾರದ ಕಾರಣ ಹಾಕಿದ ಹಣವೆಲ್ಲ ಹಾಳಾಗಿದೆ. ಈಗ ನಾನು ಏನು ಮಾಡಬೇಕು  ಎಂದು ಕುಂಟೋಜಿ ಗ್ರಾಮದ ಯುವ ರೈತನೊಬ್ಬ ಕಣ್ಣೀರಿನಿಂದ ಅಳಲು ತೋಡಿಕೊಂಡರು.

ಕೃಷಿಯನ್ನೇ ಜೀವನಾಧಾರ ವಾಗಿಸಿಕೊಂಡು ಸ್ವಾವಲಂಬಿಯಾಗಿ ಬದುಕಲು ಮುಂದಾದ ವಿದ್ಯಾವಂತ ಯುವಕರಿಗೂ ಪ್ರಕೃತಿ ವೈಪರೀತ್ಯದ ಹೊಡೆತ ತೀವ್ರವಾಗಿ ತಟ್ಟುತ್ತಿದೆ. ಸಾಲ ಮಾಡಿ ಕೃಷಿ ಮಾಡುವ ಪರಿಸ್ಥಿತಿ ನಿರ್ಮಾಣವಾದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಅವರು ನೋವು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪದವೀಧರ ಕ್ಷೇತ್ರದ ಎಂಎಲ್‌ಸಿ ಹಣಮಂತ ನಿರಾಣಿ, ಮುನ್ನಾಧಣಿ ನಾಡಗೌಡ ಮಾತನಾಡಿದರು. ಶಾಸಕ ದುರ್ಯೋಧನ ಐಹೋಳೆ, ಉದ್ಯಮಿ ಉಮೇಶ ಕಾರಜೋಳ, ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ತಾಲೂಕಾಧ್ಯಕ್ಷ ಜಗದೀಶ ಪಂಪಣ್ಣವರ,

ಹಿರಿಯ ಮುಖಂಡ ಎಂ.ಎಸ್. ಪಾಟೀಲ, ಮಲಕೇಂದ್ರಾಯಗೌಡ ಪಾಟೀಲ, ಬಸವರಾಜ ಯಂಕಂಚಿ, ಮುತ್ತು ಸಾಹುಕಾರ, ಕೆಂಚಪ್ಪ ಬಿರಾದಾರ,  ಮುತ್ತಣ್ಣ ಹುಗ್ಗಿ,  ಸಂಗನಗೌಡ ಪಾಟೀಲ  ಶಿವಲಿಂಗಪ್ಪ ಗಸ್ತೆಗಾರ, ನಾಗಲಿಂಗಯ್ಯ ಮಠ,  ಗುರಲಿಂಗಪ್ಪ ಸುಳ್ಳಳ್ಳಿ, ಸಂಗಮ್ಮ ದೇವರಳ್ಳಿ,  ಗಿರೀಶಗೌಡ ಪಾಟೀಲ, ರವಿ ಮಾದಿನಾಳ, ಪ್ರಕಾಶ ಹೂಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.   ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ವತಿಯಿಂದ ನಡೆದ ಬರ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್. ರವಿಕುಮಾರ ಮಾತನಾಡಿದರು