ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ: ಉಗ್ರಪ್ಪ

ಬೆಂಗಳೂರು, ನ. 15  :     ರಾಜ್ಯದ 418 ಸ್ಥಳೀಯ ಸಂಸ್ಥೆಗಳ ಪೈಕಿ 151 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಮುಖಭಂಗವಾಗಿದೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮತದಾರರೇ ಬಿಜೆಪಿಯನ್ನು 125 ಕ್ಕೆ ಇಳಿಸಿದ್ದು ಮತದಾರರು ಬಿಜೆಪಿಯನ್ನು ತಿರಸ್ಕರಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. 

ಯಡಿಯೂರಪ್ಪ ನೀತಿ ಸಂಹಿತೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಒಂದು ವರ್ಷ ಸೆರೆವಾದ ಶಿಕ್ಷೆಯಾಗಬಹುದು. ಅನರ್ಹರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಮತದಾರರ ಓಲೈಕೆ ಪ್ರಯತ್ನ ಮಾಡಿ, ಕಲಂ 123 ಪ್ರಕಾರ ಜನಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಯಡಿಯೂರಪ್ಪ 16 ಮಂದಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ನೈತಿಕವಾಗಿ ಅವರು ಬೆತ್ತಲಾಗಿದ್ದಾರೆ. ಈ ಹಿಂದೆ ಮೈತ್ರಿ ಸರ್ಕಾರದ ಪತನಕ್ಕೂ ಶಾಸಕರ ರಾಜೀನಾಮೆಗೂ ಸಂಬಂಧವಿಲ್ಲ,  ಆಪರೇಷನ್ ಕಮಲ ಮಾಡಿಲ್ಲ ಎನ್ನುತ್ತಿದ್ದರು. ಆದರೀಗ ಅವರು ಮಾಡಿರುವುದೇನು ? ಎಂದು ಉಗ್ರಪ್ಪ ಪ್ರಶ್ನಿಸಿದರು.

ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ. ಅರ್ಹರಿಗೆ ಕೊಟ್ಟ ಭರವಸೆ ಈಡೇರಿಸುತ್ತೇನೆ ಎಂದಿದ್ದಾರೆ. ಹಾಗಾದರೆ ಯಡಿಯೂರಪ್ಪ ಇಲ್ಲಿಯವರೆಗೆ ಹೇಳಿದ್ದು ಸುಳ್ಳಲ್ಲವೆ ? ಸುಳ್ಳು ಹೇಳಿದ್ದಕ್ಕೆ ಯಡಿಯೂರಪ್ಪ ಜನರ ಕ್ಷಮೆಯಾಚಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ಅನರ್ಹರನ್ನು ನಂಬಿಸಿ ಕತ್ತು ಕೊಯ್ದಿದ್ದಾರೆ. ಯಡಿಯೂರಪ್ಪ ಎಷ್ಟು ದಿನ ಸರ್ಕಾರದಲ್ಲಿ ಇರುತ್ತಾರೆಯೋ ಗೊತ್ತಿಲ್ಲ. ಇವರು ಹೋದ ಮೇಲೆ 

ಅನರ್ಹರನ್ನು ಹೇಗೆ ಯಾರು ಕಾಯುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ರಾಣೆಬೆನ್ನೂರಿನ ಅನರ್ಹ ಶಾಸಕ ಆರ್.ಶಂಕರ್ ಗೆ ಟಿಕೆಟ್ ನಿರಾಕರಿಸಿರುವ ಯಡಿಯೂರಪ್ಪ ವಿಶ್ವಾಸದ್ರೋಹವೆಸಗಿದ್ದಾರೆ. ಇದರೊಂದಿಗೆ ಮಾಜಿ ಸಚಿವ ರೋಷನ್ ಬೇಗ್ ಗೂ ದ್ರೋಹ ವೆಸಗಿದ್ದಾರೆ. ಬಿಜೆಪಿಯ ಒತ್ತಡಕ್ಕೆ ರಾಜೀನಾಮೆ ಸಲ್ಲಿಸಿದ ಇವರಿನ್ನೂ ಬೀದಿಪಾಲು ಆಗಿದ್ದಾರೆ. ಉಳಿದವರಿಗೂ ಮುಂದೆ ಇದೇ ಶಿಕ್ಷೆಯಾಗಲಿದೆ. ಇದಕ್ಕಾಗಿ ಇನ್ನೂ ಹೆಚ್ಚಿನ ದಿನ ಕಾಯಬೇಕಿಲ್ಲ ಎಂದು ಉಗ್ರಪ್ಪ ಭವಿಷ್ಯ ನುಡಿದರು.