ಮಂಗಳೂರು, ಫೆ.28 : ಮಂಗಳೂರು ಮಹಾನಗರ ಪಾಲಿಕೆಯ ೨೧ನೆ ನೂತನ ಮೇಯರ್ ಆಗಿ ಬಿಜೆಪಿಯ ದಿವಾಕರ್ ಹಾಗೂ ಉಪ ಮೇಯರ್ ಆಗಿ ಇದೇ ಪಕ್ಷದ ವೇದಾವತಿ ಯಾನೆ ಜಾನಕಿ ಆಯ್ಕೆಗೊಂಡಿದ್ದಾರೆ.
ಮೇಯರ್ ಹಿಂದುಳಿದ ವರ್ಗ ಎ , ಉಪ ಮೇಯರ್ ಗೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿತ್ತು.
ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿಂದು ನಡೆದ ಚುನಾವಣೆಯನ್ನು ಪ್ರಕ್ರಿಯೆಯನ್ನು ಮೈಸೂರು ಪ್ರಾದೇಶಿಕ ಆಯುಕ್ತರ ವಿ. ಯಶವಂತ ಚುನಾವಣಾ ನಡೆಸಿಕೊಟ್ಟರು. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಪಾಲಿಕೆ ಕಮಿಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
ದಿವಾಕರ್ ಅವರು ಕಂಟೋನ್ಮೆಂಟ್ ವಾರ್ಡ್ ನಂ. 46ರಿಂದ ಸತತ ಮೂರನೇ ಬಾರಿಗೆ ಆಯ್ಕೆಗೊಂಡಿದ್ದಾರೆ. ಉಪ ಮೇಯರ್ ವೇದಾವತಿ ಅವರು ಕುಳಾಯಿ ವಾರ್ಡ್ ನಂ.9ರಿಂದ ಎರಡನೇ ಬಾರಿ ಆಯ್ಕೆಗೊಂಡಿದ್ದಾರೆ.
ಕಾಂಗ್ರೆಸ್‌ನಿಂದ ಕೇಶವ ಹಾಗೂ ಬಿಜೆಪಿಯಿಂದ ದಿವಾಕರ ಪಾಂಡೇಶ್ವರ ನಾಮಪತ್ರ ಸಲ್ಲಿಸಿದ್ದು ನಾಮಪತ್ರಗಳು ಕ್ರಮಬದ್ಧವಾಗಿರುವುದಾಗಿ ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ವಿ.ಯಶವಂತ ಪ್ರಕಟಿಸಿದರು. ಕೈ ಎತ್ತುವ ಮೂಲಕ ಮತ ಚಲಾವಣೆ ಗೆ ಅವಕಾಶ ಕಲ್ಪಿಸಲಾಯಿತು. ಕಾಂಗ್ರೆಸ್‌ನ ಕೇಶವ ಅವರ ಪರವಾಗಿ 15 (14 ಮಂದಿ ಸದಸ್ಯರು ಹಾಗೂ ಓರ್ವ ವಿಧಾನ ಪರಿಷತ್ ಸದಸ್ಯರು ಸೇರಿ) ಮತಗಳು ಚಲಾವಣೆಯಾದರೆ. ಎಸ್ ಡಿಪಿಐ ನ ಇಬ್ಬರು ಸದಸ್ಯರು ತಟಸ್ಥವಾಗಿದ್ದರು.
ಬಿಜೆಪಿಯ ದಿವಾಕರ ಪಾಂಡೇಶ್ವರ ಪರವಾಗಿ 46 ಮತಗಳು (ವಿಧಾನ ಸಭೆ ಇಬ್ಬರು ಸದಸ್ಯ ರ ಮತ ಸೇರಿ) ಚಲಾವಣೆಯಾಯಿತು. ಈ ಮೂಲಕ ಪಾಲಿಕೆಯ ನೂತನ ಮೇಯರ್ ಆಗಿ ನಿರೀಕ್ಷೆಯಂತೆ ದಿವಾಕರ ಪಾಂಡೇಶ್ವರ ಆಯ್ಕೆಯಾದರು.
ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಝೀನತ್ ಸಂಶುದ್ದೀನ್ ಹಾಗೂ ಬಿಜೆಪಿಯಿಂದ ಜಾನಕಿ ಯಾನೆ ವೇದಾವತಿ ಸ್ಪರ್ಧಿಸಿದ್ದರು. ಝೀನತ್ ಪರವಾಗಿ ಎಸ್‌ಡಿಪಿಐನ ಇಬ್ಬರು ಸದಸ್ಯರು ಬೆಂಬಲ ನೀಡಿದ್ದರಿಂದ 17 ಮತಗಳು ಹಾಗೂ ವೇದಾವತಿ ಪರವಾಗಿ 46 ಮತಗಳು ಚಲಾವಣೆಯಾದವು. ನೂತನ ಉಪ ಮೇಯರ್ ಆಗಿ ಬಿಜೆಪಿಯ ವೇದಾವತಿ ಆಯ್ಕೆಯಾದರು.