ಏಪ್ರಿಲ್ 20ರಂದು ಬಿಬಿಎಂಪಿ ಬಜೆಟ್ ಮಂಡನೆ: ಕೇವಲ 30 ಮಂದಿಗೆ ಮಾತ್ರ ಪ್ರವೇಶ- ಆರ್‌.ಅಶೋಕ್

ಬೆಂಗಳೂರು,  ಏ.17, ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್  ಮುಂದೂಡಲಾಗಿತ್ತು. ಆದರೆ ಈಗ ಬಿಬಿಎಂಪಿ ಬಜೆಟ್ ಮಂಡನೇ ಮಾಡಲೇಬೇಕಾಗಿದೆ. ಈ  ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಇಂದು ಚರ್ಚೆ ನಡೆಸಿದ್ದು, ಬಿಬಿಎಂಪಿ ಬಜೆಟ್ ಇದೇ  ತಿಂಗಳ 20ರಂದು ಮಂಡನೆಯಾಗಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಬಿಎಂಪಿ  ಕೌನ್ಸಿಲ್ ಸಭೆಯಲ್ಲಿ ಏ.20ರಂದು ಬೆಳಿಗ್ಗೆ 11 ಕ್ಕೆ ಬಜೆಟ್ ಮಂಡಿಸಲಾಗುತ್ತದೆ. ಆದರೆ  ನಿಗದಿತ  ಸದಸ್ಯರಿಗಷ್ಟೇ ಸಭೆಗೆ ಬರಲು ಅವಕಾಶ ಕಲ್ಪಿಸಲಾಗುತ್ತದೆ. ಸ್ಥಾಯಿ ಸಮಿತಿ  ಸದಸ್ಯರು,  ವಿಪಕ್ಷ ಸದಸ್ಯರು ಹಾಗೂ ಆಡಳಿತ ಪಕ್ಷದ ಸದಸ್ಯರು ಸೇರಿ ಒಟ್ಟು 30  ಜನರು  ಇರುತ್ತಾರೆ.  ಅವತ್ತಿನ ಸಭೆಯಲ್ಲಿ ಒಂದು ಸಾಲಿನಲ್ಲಿ ಒಬ್ಬೊಬ್ಬರು ಸದಸ್ಯರು  ಕುಳಿತುಕೊಳ್ಳುತ್ತಾರೆ. ಸಾಮಾಜಿಕ ಅಂತರವನ್ನು ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಿ ಬಜೆಟ್  ಮಂಡನೆ ಮಾಡಲಾಗುತ್ತದೆ. ಬೇರೆ ಪಾಲಿಕೆ ಸದಸ್ಯರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ  ನೀಡಲಾಗುತ್ತದೆ.  8 ವಲಯಗಳಿಂದ ವೀಡಿಯೋ ಕಾನ್ಪೆರೆನ್ಸ್ ಮೂಲಕ ಬಜೆಟ್  ಬಗ್ಗೆ ಮಾಹಿತಿ  ಕೊಡಲಾಗುವುದು ಎಂದು ತಿಳಿಸಿದರು.
ಈ ಬಾರಿ ಒಳ್ಳೆಯ ಬಜೆಟ್ ಮಂಡನೆಯಾಗಲಿದೆ.  ಕೊರೊನಾ ನಿಯಂತ್ರಣಕ್ಕೆ ಪ್ರತಿ ವಾರ್ಡ್ ಗೆ 25 ಲಕ್ಷ ರೂ. ಮೀಸಲಿಡಲಾಗುತ್ತದೆ. ಒಟ್ಟಾರೆ  ಇದಕ್ಕಾಗಿ 50 ಕೋಟಿ ರೂ. ಮೀಸಲಿಡಲಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿಯ ಬಜೆಟ್  ಗಾತ್ರ ಚಿಕ್ಕದಾಗಿರಲಿ ಎಂದು ಸಲಹೆ ನೀಡಿದ್ದೇವೆ. ಆದರೆ ಅಂತಿಮ ತೀರ್ಮಾನ ಬಿಬಿಎಂಪಿಗೆ  ಬಿಟ್ಟಿದ್ದು ಎಂದು ಹೇಳಿದರು.
ಅಕ್ರಮ ಸಕ್ರಮದ ಬಗ್ಗೆ ಮುಖ್ಯಮಂತ್ರಿ ಸಭೆ  ಕರೆದಿದ್ದರು. ಸಭೆಯಲ್ಲಿ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೂಡ  ಭಾಗಿಯಾಗಿದ್ದರು. ಸಭೆಯಲ್ಲಿ ಪ್ರಕರಣ ಸುಖಾಂತ್ಯವಾಗುವ ನಿಟ್ಟಿನಲ್ಲಿ ಚರ್ಚೆ ಆಗಿದೆ.  ಬಡವರು ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿಕೊಂಡವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕ್ರಮ  ಕೈಗೊಳ್ಳಲಾಗುತ್ತದೆ. ಬಿಲ್ಡರ್‌ಗಳಿಗೆ, ರಿಯಲ್ ಎಸ್ಟೇಟ್ ‌ಗೆ ಅನುಕೂಲವಾಗಬಾರದು, ಆ  ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಒಂದು ಮಾರ್ಜಿನ್‌ ನಿಗದಿ  ಪಡಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.