ನವದೆಹಲಿ/ ಬೆಂಗಳೂರು, ನ 9 : ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ಮಾಲಿಕತ್ವದ ವಿವಾದಕ್ಕೆ ಕೊನೆಗೂ ಇಂದು ತೆರೆ ಬೀಳುವ ನಿರೀಕ್ಷೆಯಿದ್ದು, ಎಲ್ಲರ ಚಿತ್ತ ಸುಪ್ರೀಂಕೋರ್ಟ್ ನತ್ತ ನೆಟ್ಟಿದೆ. ಸತತ 40 ದಿನಗಳ ಕಾಲ ಈ ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ಪ್ರಕರಣದ ತೀಪು ಪ್ರಕಟಿಸಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಾಂವಿಧಾನಿಕ ಪೀಠ ಅಕ್ಟೋಬರ್ 16ರಂದು ತೀಪು ಕಾಯ್ದಿರಿಸಿತ್ತು. ಅಯೋಧ್ಯಾ ತೀರ್ಪುನ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈ ಅಲರ್ಟ್ ಘೊಷಿಸಲಾಗಿದೆ. ರಾಜ್ಯದಲ್ಲಿ ಕೂಡ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ, ಈ ಹಿನ್ನೆಲೆಯಲ್ಲಿ ಫೇಸ್ ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶ, ಪೋಸ್ಟ್ ಅಥವಾ ಹೇಳಿಕೆಗಳನ್ನು ಮಾಡದಂತೆ ರಾಜ್ಯ ಪೊಲೀಸ್ ಸೂಚನೆ ನೀಡಿದೆ. ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗಲಿದ್ದು, ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ಸೂಕ್ಷ್ಮ ನಿಗಾವಹಿಸಲಾಗಿದೆ. ತಪ್ಪು ಸಂದೇಶಗಳನ್ನು ರವಾನಿಸುವುದಾಗಲಿ,ಯಾವುದೇ ಧರ್ಮಕ್ಕೆ ಸಂಬಂಧಿಸಿದಂತೆ ಅಕ್ಷೇಪಾರ್ಹ ಬರಹಗಳು, ಪೋಸ್ಟರ್, ವಿಡಿಯೋ ಸಂದೇಶಗಳನ್ನು ಕಳುಹಿಸುವಂತಿಲ್ಲ. ಯಾವುದೇ ರಾಜಕೀಯ ಹಾಗೂ ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶಗಳನ್ನು ಕಳುಹಿಸುವುದು, ರವಾನಿಸುವುದು ಅಪರಾಧವಾಗಿದ್ದು, ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಈಗಾಗಲೇ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ನಗರದಲ್ಲೂ ಕಟ್ಟೆಚ್ಚರ ಅಯೋಧ್ಯೆ ತೀಪು ನಾಳೆ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲೆಡೆ ಬಿಗಿ ಭದ್ರತೆ ಒದಗಿಸಲಾಗಿದೆ. ಬೆಂಗಳೂರಿನಲ್ಲಿ ನಾಳೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಮದ್ಯ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ.ಯಾವುದೇ ಕಡೆ ಸಂಭ್ರಮಾಚರಣೆ, ಪ್ರತಿಭಟನೆ ಸಭೆ ನಡೆಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಿ ನಿಗಾ ಇಡಲಾಗಿದೆ. ಮಂದಿರ, ಮಸೀದಿಗಳಿಗೆ ಭದ್ರತೆ ಒದಗಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಜೊತೆಗೆ ಗೃಹ ರಕ್ಷಕ ದಳ,ಎರಡು ಪ್ಯಾರಾ ಮಿಲಿಟರಿ ಪಡೆ, ಆರ್ಎಎಫ್ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ನಗರದಲ್ಲಿ 50 ಕೆಎಸ್ಆರ್ಪಿ, 30 ಸಿಎಎಆರ್, 14 ಡಿಸಿಪಿ, 34 ಎಸಿಪಿ, ಒಂದು ಸಿಆರ್ಪಿಎಫ್ ತುಕಡಿ ಸೇರಿ ಬೆಂಗಳೂರಿನಲ್ಲಿ 8000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಬೆಂಗಳೂರು ನಗರದಲ್ಲಿ ಸಂಪೂರ್ಣ ಹೈಅಲರ್ಟ್ ಘೋಷಿಸಲಾಗಿದ್ದುಸೂಕ್ಷ್ಮ ಪ್ರದೇಶಗಳಿಗೆ 30ಕೆಎಸ್ ಆರ್ ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಪೂರ್ವ ಹಾಗೂ ಪಶ್ಚಿಮ ವಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗೆ ನಡೆಯದಂತೆ ನಿಗಾ ವಹಿಸಲಾಗಿದೆ. 50 ಕೆಎಸ್ಆರ್ ಪಿ ತುಕಡಿ, 20 ಸಿಆರ್ ತುಕಡಿ, ಡಿಸಿಪಿ, ಐಜಿಪಿ 18 ಮಂದಿ ಐಪಿಎಸ್ ಅಧಿಕಾರಿಗಳಿಗೆ ಭದ್ರತೆಯ ನೇತೃತ್ವ ನೀಡಲಾಗಿದೆ. ಬೆಳಿಗ್ಗೆ ಏಳರಿಂದಲೇ ನಗರದ ನಿಗದಿಪಡಿಸಿದ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಐತಿಹಾಸಿಕ ತೀಪು ದೇಶದ ಧಾರ್ಮಿಕ ಹಾಗೂ ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ರಾಮ ಜನ್ಮಭೂಮಿ- ಬಾಬ್ರಿ ಮಸೀದಿಯ ಭೂ ಮಾಲಿಕತ್ವದ ವಿಚಾರಣೆ ನಡೆಸಿದ್ದ ಪೀಠದ ನೇತೃತ್ವದ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನ.17ರಂದು ನಿವೃತ್ತಿ ಹೊಂದಲಿದ್ದು, ಅದಕ್ಕೂ ಮುನ್ನ ಈ ಐತಿಹಾಸಿಕ ತೀಪು ಪ್ರಕಟಿಸಲಿದ್ದಾರೆ. ವಿವಾದಿತ ಭೂಮಿಯ 2.77 ಎಕರೆ ಜಾಗ ಯಾರ ಒಡೆತನಕ್ಕೆ ಸೇರಬೇಕು ಎಂಬುದರ ಕುರಿತು ಇಂದು ತೀಪು ಹೊರಬೀಳಲಿದೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಜಾಗದಲ್ಲೇ ಭಗವಾನ್ ರಾಮನ ಜನ್ಮ ಸ್ಥಳದಲ್ಲಿಯೇ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು 1992ರ ಡಿಸೆಂಬರ್ 6ರಂದು ಮಸೀದಿಯನ್ನು ಧ್ವಂಸ ಮಾಡಿದ್ದರು. ಇದು ದೇಶಾದ್ಯಂತ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. 2002ಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ವಿಚಾರಣೆ ಆರಂಭಿಸಿತ್ತು. 2010ರಲ್ಲಿ ನ್ಯಾಯಾಲಯ ವಿವಾದಿತ ಭೂಮಿಯನ್ನು ರಾಮಲಲ್ಲಾ, ನಿರ್ಮೊಹಿ ಅಖಾಡ ಮತ್ತು ಸುನ್ನಿ ಮಂಡಳಿಗೆ ಸಮಾನವಾಗಿ ಹಂಚಿಕೆ ಮಾಡಿ ತೀಪು ನೀಡಿತ್ತು. ಇದನ್ನು ಪ್ರಶ್ನಿಸಿ ಮೂವರು ಅರ್ಜಿದಾರರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಹೋಗಿದ್ದರು. 2011ರಲ್ಲಿ ಸುಪ್ರೀಂಕೋರ್ಟ್ ಹೈಕೋರ್ಟ್ ತೀರ್ಪುಗೆ ತಡೆಯಾಜ್ಞೆ ನೀಡಿತ್ತು. 2019ರಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿ, ರಾಜಿ ಸಂಧಾನದಿಂದ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಆದ್ಯತೆ ಮೇರೆಗೆ ಸತತ ವಿಚಾರಣೆ ನಡೆಸಿತ್ತು.