ಮಕ್ಕಳ ಸುರಕ್ಷತೆ ಕುರಿತು ಹಲಗಾದಲ್ಲಿ ಜಾಗೃತಿ ಕಾರ್ಯಕ್ರಮ: ಕಳ್ಳಸಾಗಣೆ, ಬಾಲ್ಯವಿವಾಹ ತಡೆಗೆ ಒತ್ತು

ಮಕ್ಕಳ ಸುರಕ್ಷತೆ ಕುರಿತು ಹಲಗಾದಲ್ಲಿ ಜಾಗೃತಿ ಕಾರ್ಯಕ್ರಮ: ಕಳ್ಳಸಾಗಣೆ, ಬಾಲ್ಯವಿವಾಹ ತಡೆಗೆ ಒತ್ತು  Awareness program in Halaga on child safety: Emphasis on preventing trafficking, child marriage

ಹಲಗಾ ಬೆಳಗಾವಿ: ಮಕ್ಕಳ ಕಳ್ಳ ಸಾಗಾಣಿಕೆ ಹಾಗೂ ಬಾಲ್ಯವಿವಾಹಗಳು ಸಮಾಜಕ್ಕೆ ಮಾರಕವಾಗಿದ್ದು, ಪ್ರತಿಯೊಬ್ಬರೂ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳ ಮೇಲೆ ದೌರ್ಜನ್ಯ, ಅತಿಯಾದ ಶೋಷಣೆ ಅಥವಾ ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದರೆ ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.  

ಆಪರೇಷನ್ ರೆಡ್ ಅಲರ್ಟ, ಹೈದರಾಬಾದ್ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸುರಕ್ಷಿತ ಗ್ರಾಮ ಕಾರ್ಯಕ್ರಮದ ಅಂಗವಾಗಿ ಹಳಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ, ಬಾಲ್ಯವಿವಾಹ ತಡೆ, ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  

ಈ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳು, ಶಿಕ್ಷಣದ ಮಹತ್ವ ಹಾಗೂ ಸುರಕ್ಷಿತ ಬಾಲ್ಯ ನಿರ್ಮಾಣದಲ್ಲಿ ಪೋಷಕರು, ಶಿಕ್ಷಕರು ಮತ್ತು ಸಮುದಾಯದ ಪಾತ್ರ ಅತ್ಯಂತ ಮುಖ್ಯವೆಂದು ತಿಳಿಸಲಾಯಿತು. ಸುಮಾರು 230 ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲ ಮಕ್ಕಳಿಗೂ ಸುರಕ್ಷಿತ ಗ್ರಾಮ ಕೈಪಿಡಿ ವಿತರಿಸಲಾಯಿತು.  

ನಂತರ ಹಳಗಾ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಮುದಾಯ ನಾಯಕರು ಹಾಗೂ ತಾಯಂದಿರಿಗಾಗಿ ಜಾಗೃತಿ ಸಭೆ ನಡೆಯಿತು. ಸಭೆಯಲ್ಲಿ ಬಾಲ್ಯವಿವಾಹ ತಡೆ, ಮಕ್ಕಳ ಕಳ್ಳ ಸಾಗಾಣಿಕೆ ತಡೆ, ಪೋಕ್ಸೋ ಕಾಯ್ದೆಯ ಪ್ರಮುಖ ಅಂಶಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.  

ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವೆಂದು ಒತ್ತಿ ಹೇಳಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಶಿಕ್ಷಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.