ಕೃಷಿಯಲ್ಲಿ ಕೀಟನಾಶಕಗಳ ಸುರಕ್ಷಿತ ಹಾಗೂ ವಿವೇಚನಾಯುಕ್ತ ಬಳಕೆ ಕುರಿತು ರೈತರಿಗೆ ಜಾಗೃತಿ ಕಾರ್ಯಕ್ರಮ

ಕೃಷಿಯಲ್ಲಿ ಕೀಟನಾಶಕಗಳ ಸುರಕ್ಷಿತ ಹಾಗೂ ವಿವೇಚನಾಯುಕ್ತ ಬಳಕೆ ಕುರಿತು ರೈತರಿಗೆ ಜಾಗೃತಿ ಕಾರ್ಯಕ್ರಮ  Awareness program for farmers on the safe and judicious use of pesticides in agriculture

ಬ್ಯಾಡಗಿ, ಜು.16: ಕೃಷಿ ಇಲಾಖೆಯ ವತಿಯಿಂದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೃಷಿಯಲ್ಲಿ ಕೀಟನಾಶಕಗಳ ಸುರಕ್ಷಿತ ಹಾಗೂ ವಿವೇಚನಾಯುಕ್ತ ಬಳಕೆ ಕುರಿತು ರೈತರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.  

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪ ಕೃಷಿ ನಿರ್ದೇಶಕ ಕರಿಯಪ್ಪ ಕೊರಚರ ಅವರು, ಕೀಟನಾಶಕಗಳ ಅತಿಯಾದ ಹಾಗೂ ಅವೈಜ್ಞಾನಿಕ ಬಳಕೆಯಿಂದ ಪರಿಸರ, ಮಣ್ಣು, ಜಲಮೂಲಗಳು, ಪರಾಗಸ್ಪರ್ಶಕ ಕೀಟಗಳು ಮತ್ತು ಮಾನವ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು. ರೈತರು ಸಮಗ್ರ ಕೀಟ ನಿರ್ವಹಣಾ ತತ್ವಗಳನ್ನು ಅನುಸರಿಸಿ, ಆರ್ಥಿಕ ಹಾನಿ ಮಿತಿಯನ್ನು ಆಧರಿಸಿ ಮಾತ್ರ ಕೀಟನಾಶಕಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.  

ಸಹಾಯಕ ಕೃಷಿ ನಿರ್ದೇಶಕ ಗಣೇಶ್ ಕಮ್ಮಾರ ಮಾತನಾಡಿ, ರೈತರು ನೋಂದಾಯಿತ ಹಾಗೂ ಶಿಫಾರಸು ಮಾಡಿದ ಉತ್ಪನ್ನಗಳನ್ನಷ್ಟೇ ಖರೀದಿಸಬೇಕು. ಲೇಬಲ್ ಮತ್ತು ಕರಪತ್ರದಲ್ಲಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಓಷಧ ಸಿಂಪಡಣೆ ಮಾಡಬೇಕು ಎಂದರು. ಸಿಂಪಡಣೆ ವೇಳೆ ವೈಯಕ್ತಿಕ ಸುರಕ್ಷತಾ ಸಾಧನಗಳಾದ ಮುಖವಸ್ತ್ರ, ಕೈಗವಸು, ರಕ್ಷಣಾತ್ಮಕ ಉಡುಪು ಹಾಗೂ ಬೂಟುಗಳನ್ನು ಧರಿಸಬೇಕು. ಖಾಲಿ ಕೀಟನಾಶಕ ಡಬ್ಬಿ ಹಾಗೂ ಬಾಟಲಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂದು ತಿಳಿಸಿದರು.  

ಕೆವಿಕೆ ಹನುಮಂತಮಟ್ಟಿ ವಿಜ್ಞಾನಿ ಡಾ. ರಶ್ಮಿ ಅವರು ರೈತರಿಗೆ ಕಿಸಾನ್ ಸಾರಥಿ ಆ್ಯಪ್ ಕುರಿತು ಮಾಹಿತಿ ನೀಡಿ, ಈ ಆ್ಯಪ್ ಮೂಲಕ ಕೃಷಿ ತಾಂತ್ರಿಕ ಸಲಹೆಗಳು, ಹವಾಮಾನ ಮಾಹಿತಿ ಹಾಗೂ ಬೆಳೆ ನಿರ್ವಹಣೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಸುಲಭವಾಗಿ ಪಡೆಯಬಹುದು ಎಂದು ಹೇಳಿದರು.  

ಡಾ. ಅಕ್ಷತಾ ಅವರು ಸಮಗ್ರ ಕೀಟ ನಿರ್ವಹಣೆ, ಜೈವಿಕ ನಿಯಂತ್ರಣ ವಿಧಾನಗಳು, ಹಳದಿ ಮತ್ತು ನೀಲಿ ಅಂಟು ಬಲೆಗಳ ಬಳಕೆ, ಫೆರೋಮೋನ್ ಟ್ರ್ಯಪ್ಗಳ ಉಪಯೋಗ ಹಾಗೂ ಬೆಳೆ ಸಂರಕ್ಷಣೆಯಲ್ಲಿ ರಾಸಾಯನಿಕ ಮತ್ತು ಜೈವಿಕ ವಿಧಾನಗಳ ಸಮನ್ವಯದ ಕುರಿತು ರೈತರಿಗೆ ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ನಿಂಗಪ್ಪ ಕಾಕೋಳ ಹಾಗೂ ನಾಗರಾಜ ಬನ್ನಿಹಟ್ಟಿ, ಆತ್ಮ ಯೋಜನೆಯ ಸಿಬ್ಬಂದಿ ಗುಡ್ಡಪ್ಪ ಅರಳಿಕಟ್ಟಿ, ಕೃಷಿ ಸಿಬ್ಬಂದಿ ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿ ಕೀಟನಾಶಕಗಳ ಸುರಕ್ಷಿತ ಬಳಕೆ, ಸಮಗ್ರ ಕೀಟ ನಿರ್ವಹಣೆ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಪಡೆದರು.