ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ Awareness program as part of World Hearing Day

        ಕೊಪ್ಪಳ  03:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಹಾಗೂ ಸರ್ವೋದಯ ಗ್ರಾಮೀಣ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಮಂಗಳವಾರಂದು ವಿಶ್ವ ಶ್ರವಣ ದಿನ ಜಾಗೃತಿ ಕಾರ್ಯಕ್ರಮ ಹಾಗೂ ಕಿವಿ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. 

ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಹೆಚ್‌. ಮಾತನಾಡಿ, ಪ್ರತಿ ವರ್ಷ ಮಾರ್ಚ್‌ 3 ರಂದು “ವಿಶ್ಚ ಶ್ರವಣ ದಿನ”  ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಉದ್ದೇಶ ಶ್ರವಣದೋಷ ಮತ್ತು ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. “ಸಮುದಾಯಗಳಿಂದ ತರಗತಿಗಳಿಗೆ: ಎಲ್ಲಾ ಮಕ್ಕಳಿಗೆ ಶ್ರವಣ ಆರೈಕೆ, ಯಾವುದೇ ಮಗು ಶ್ರವಣ ಅಥವಾ ಶ್ರವಣ ಸಮಸ್ಯೆಗಳಿಂದ ಭವಿಷ್ಯದಲ್ಲಿ ಹಿಂದೆ ಉಳಿಯದಂತೆ ಈಗಲೇ ನಿಗಾವಹಿಸಿ” ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಚರಿಸಲಾಗುತ್ತದೆ.

       ಕಿವಿಯು ಪ್ರತಿಯೊಬ್ಬ ಮನುಷ್ಯನ ಪಂಚೇಂದ್ರಿಯಗಳಲ್ಲಿ ಪ್ರಮುಖ ಅಂಗವಾಗಿದ್ದು, ಅದನ್ನು ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ ರಕ್ಷಣೆ ಮಾಡಿಕೊಳ್ಳಬೇಕು. ಕಿವಿಯಲ್ಲಿ ಕಡ್ಡಿ ಹಾಕಬಾರದು, ಎಣ್ಣೆ ಹಾಕಬಾರದು, ನಕಲಿ ವೈದ್ಯರ ಕಡೆಯಿಂದ ಕಿವಿಯಲ್ಲಿ ಗುಗ್ಗೆ ತೆಗೆಸಿಕೊಳ್ಳಬಾರದು. ವೈದ್ಯರ ಸಲಹೆ ಇಲ್ಲದೆ ಕಿವಿಯಲ್ಲಿ ಏನೂ ಹಾಕಬಾರದು, ಕಲುಷಿತ ನೀರಿನಲ್ಲಿ ಈಜಬಾರದು ಎಂದು ತಿಳಿಸಿದರು. ಕಿವಿನೋವು, ಸೋರುವಿಕೆ ಕಂಡು ಬಂದರೆ ತಮ್ಮ ಸಮೀಪದ ತಾಲೂಕಾ/ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕಿವಿ, ಮೂಗು, ಗಂಟಲು ತಜ್ಞರನ್ನು ಸಂಪರ್ಕಿಸಬೇಕು ಹಾಗೂ 2 ವರ್ಷದೊಳಗಿನ ಮಕ್ಕಳಿಗೆ ಉಚಿತ ಶ್ರವಣ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಎಲ್ಲರೂ ತಮ್ಮ ತಮ್ಮ ಕಿವಿಯ ರಕ್ಷಣೆಯ ಬಗ್ಗೆ ಜಾಗೃತರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಕಿವಿ, ಮೂಗು ಹಾಗೂ ಗಂಟಲು ತಜ್ಞರಾದ ಡಾ. ಅವಿನಾಶ ಮಾತನಾಡಿ, ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ, ನವಜಾತು ಶಿಶುವಿನ ಕಿವಿಯ ಆರೈಕೆ ಮತ್ತು ಕಾರ್ಯಕ್ರಮದಡಿಯಲ್ಲಿ ಸಿಗುವ ಸೇವಾ ಸೌಲಭ್ಯಗಳ ಮತ್ತು ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು.  

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಇವರು ಮಾತನಾಡಿ, ಕಿವಿಯ ಆರೋಗ್ಯ ರಕ್ಷಣೆಯಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ವಿವರವಾಗಿ ಮಾತನಾಡಿದರು. ಆಡಿಯೋಲಾಜಿಸ್ಟ್‌ ಬಿಂದು ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಡಿಯಲ್ಲಿ ಕಿವಿಯ ಪರೀಕ್ಷೆ ಹಾಗೂ ಸೇವಾ ಸೌಲಭ್ಯಗಳ ಬಗ್ಗೆ ಮಾತನಾಡಿದರು. ನಂತರ, ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಕಿವಿಯ ತಪಾಸಣೆ ಮಾಡಿ, ನ್ಯೂನ್ಯೆತೆವುಳ್ಳವರಿಗೆ ಚಿಕಿತ್ಸೆ ನೀಡಲಾಯಿತು. 

ಕಾಲೇಜಿನ ಪ್ರಾಂಶುಪಾಲರಾದ ನಿಂಗಪ್ಪ ಗದ್ದಿಗೇರಿ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಮ್ಮಿಕೊಳ್ಳುವ ಜಾಗೃತಿ ಕಾರ್ಯಕ್ರಮ ಹಾಗೂ ಕಿವಿಯ ತಪಾಸಣಾ ಶಿಬಿರ ಇಂದಿನ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಜೊತೆಗೆ ಮಾನಸಿಕ ಆರೋಗ್ಯ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ, ವಾರ್ಡ್‌ಗಳಲ್ಲಿ ಹಾಗೂ ಸುತ್ತ್ತ-ಮುತ್ತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಶ್ರೀನಿವಾಸ, ಆರೋಗ್ಯ ನೀರೀಕ್ಷಣಾಧಿಕಾರಿ ಲೋಹಿತ, ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿದರು.