ಹಿರಿಯ ಪತ್ರಕರ್ತ,ಸಾಹಿತಿ ಮಾಲತೇಶ ಅಂಗೂರ ಅವರಿಗೆ ಪ್ರಶಸ್ತಿ ಪ್ರದಾನ

 ಹಿರಿಯ ಪತ್ರಕರ್ತ,ಸಾಹಿತಿ ಮಾಲತೇಶ ಅಂಗೂರ ಅವರಿಗೆ ಪ್ರಶಸ್ತಿ  ಪ್ರದಾನ Award presented to senior journalist and writer Malatesh Angoora

ಹಾವೇರಿ 22: ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ 2020 ನೇ ಸಾಲಿನ ಪ್ರಶಸ್ತಿಯನ್ನು ಸೆ.19ರಂದು ಬೆಂಗಳೂರಿನ ವಾರ್ತಾಸೌಧದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾವೇರಿಯ ಹಿರಿಯ ಪತ್ರಕರ್ತ,ಸಾಹಿತಿ ಮಾಲತೇಶ ಅಂಗೂರ ಅವರಿಗೆ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ,1 ಲಕ್ಷರೂ ಚಕ್,ಪ್ರಶಸ್ತಿ ಫಲಕ, ಸ್ಮರಣಿಕೆ ಪ್ರದಾನ ಮಾಡಿದರು. 

ಮುಖ್ಯ ಅತಿಥಿಗಳಾಗಿ ಸಚಿವ ಭೈರತಿ ಸುರೇಶ, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ಆಯೋಗದ ಅಧ್ಯಕ್ಷರಾದ ಅಶೋಕ ಹಿಂಚಿಗೇರಿ, ವಿಧಾನ ಪರಿಷತ್ತಿನ ಮುಖ್ಯಸಚೇತಕರಾದ ಸಲೀಂ ಆಹ್ಮದ್, ವಿಧಾನ ಪರಿಷತ್ ಸದಸ್ಯ ಶಿವಕುಮಾರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ,ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ್, ಮಾಧ್ಯಮ ಅಕಾಡಮೆ ಅಧ್ಯಕ್ಷೆ ಆಯೇಷಾ ಖಾನಂ, ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ ನಿಂಬಾಳ್ಕರ, ವಾರ್ತಾ ಇಲಾಖೆಯ ಕಾರ್ಯದರ್ಶಿಗಳಾದ ಕಾವೇರಿ ಮತ್ತಿತರರು ಇದ್ದರು. 

ಮಾಲತೇಶ ಅಂಗೂರ ಸ್ಥಳೀಯ ಕೌರವ ದಿನಪತ್ರಿಕೆಯಲ್ಲಿ ಮುಖ್ಯವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸೆರೆಹಿಡಿದ ವನ್ಯಜೀವಿಗಳ ಛಾಯಾಚಿತ್ರಗಳು ಹಾಗೂ ಪರಿಸರ ಜಾಗೃತಿಯ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಯಲು, ಬರ, ನೆರೆಯ ನಾಡಿನಲ್ಲಿ ಹುಟ್ಟಿ ಬೆಳೆದ ಮಾಲತೇಶ ಅಂಗೂರ ವನ್ಯಜೀವಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ನಾಡಿನ ಉದಯೋನ್ಮುಖ ವನ್ಯಜೀವಿ ಛಾಯಾಗ್ರಾಹಕರಾಗಿ, ಪರಿಸರ ಕಾಳಜಿಯ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ.  

ಇವರು ಹಾವೇರಿ ಸುತ್ತಮುತ್ತಲಿನ ಪರಿಸರದಲ್ಲಿ ಅಪರೂಪದ ಪ್ರಾಣಿ, ಪಕ್ಷಿಗಳ ಸಾವಿರಾರು ಛಾಯಾಚಿತ್ರಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ನಾಡಿಗೆ ವನ್ಯಜೀವಿಗಳ ಪರಿಚಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವರು ಪರಿಸರಕ್ಕೆ ಸಂಬಂಧಿಸಿದಂತೆ "ಕಾಡು-ಮೇಡು" ಕೃತಿ ಹೊರ ತಂದಿದ್ದು, ಪರಿಸರ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಸರ್ಕಾರ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ 2020 ನೇಸಾಲಿನ ಪ್ರಶಸ್ತಿ ನೀಡಿ ಗೌರವಿಸಿದೆ.