ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು: ಡಾ. ನರೇಂದ್ರ

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು: ಡಾ. ನರೇಂದ್ರ Authors should be self-critical: Dr. Narendra

ಬೆಳಗಾವಿ 26: ಲೇಖಕ ತಾನೊಬ್ಬ ಓದುಗನಾಗಿ ತಾನು ಬರೆದುದನ್ನೇ ಮತ್ತೆ ಮತ್ತೆ ಓದಿ ತಿದ್ದುಪಡೆ ಮಾಡಿಕೊಳ್ಳಬೇಕು. ಸ್ವವಿಮೆರ್ಶೆಗೆ ಒಳಪಡಿಸಿಕೊಳ್ಳಬೇಕು. ತಾನು ಬರೆದುದು ಪ್ರಕಟನೆಗೆ ಯೋಗ್ಯವಾಗಿದೆಯಾ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಕಟಣೆಗೆ ಅವಸರ ಪಡಬಾರದು. ಅಂದಾಗ ಮಾತ್ರ ಮೌಲ್ಯಯುತ ಕೃತಿಗಳು ಆತನಿಂದ ಹೊರಬರಲು ಸಾಧ್ಯ ಎಂದು ರಂಗಕರ್ಮಿ, ಲೇಖಕ ಧಾರವಾಡದ ಡಾ. ಶಶಿಧರ ನರೇಂದ್ರ ಇಂದಿಲ್ಲಿ ಹೇಳಿದರು.  ನಗರದ ಹಿಂದವಾಡಿಯಲ್ಲಿರುವ ಐಎಂಇಆರ್ ಸಭಾಭವನದಲ್ಲಿ ನಿನ್ನೆ ದಿ.25 ಗುರುವಾರದಂದು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು ಹಮ್ಮಿಕೊಂಡಿದ್ದ 2025ರ ಸಿರಿಗನ್ನಡ ಗೌರವ ಪ್ರಶಸ್ತಿ, 2024 ರ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಮತ್ತು ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಅವರು ಅಭಿಪ್ರಾಯ ಪಟ್ಟರು. 

ಮೌಲ್ಯಮಾಪಕರ ಪರವಾಗಿ ಮಾತನಾಡಿದ ಕಾದಂಬರಿಕಾರ ಉಜಿರೆಯ ಡಾ. ಹಳೆಮನಿ ರಾಜಶೇಖರ ಅವರು ಮಾತನಾಡುತ್ತ, ಲೇಖಕನಿಗೆ ಓದುಗರು, ನಾಟಕಕಾರರಿಗೆ ಪ್ರೇಕ್ಷಕರು ದೇವರುಗಳಿದ್ದಂತೆ. ಅವರನ್ನು ತೃಪ್ತಿ ಪಡಿಸುವ, ಮನಸ್ಸನ್ನು, ಸಂವೇದನೆಯನ್ನು ಅರಳಿಸಲು ಚಡಪಡಿಸದ ಲೇಖಕ ಹೊಸದೇನನ್ನು ಸೃಷ್ಟಿಸಲಾರ. ಓದುಗರು ಓದಲಿ ಬಿಟ್ಟರೆ ಬಿಡಲಿ ಎಂದು  ಬರೆಯುವ ಬರೆಹಗಾರ ಆತ್ಮವಂಚನೆ ಮಾಡಿಕೊಂಡಂತೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎನ್‌. ಬಿ. ದೇಶಪಾಂಡೆಯವರು ಮಾತನಾಡುತ್ತ  ಸಂಸ್ಥೆಗಳನ್ನು ಮುಂದುವರೆಸಿಕೊಂಡು ಹೋಗಲು ಯುವಕರ ಅವಶ್ಯಕತೆಯಿದ್ದು ಪಠ್ಯೇತರ ಚಟುವಟಿಕೆಗಳಲ್ಲಿಯೂ  ಮಕ್ಕಳು ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡರು.  

ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ರಂಗಭೂಮಿಯಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಡಾ. ಅರವಿಂದ ಕುಲಕರ್ಣಿ ಮತ್ತು ಅನುವಾದ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿರುವ ಪ್ರೊ. ಚಂದ್ರಕಾಂತ ಪೋಕಳೆಯವರಿಗೆ 2025ನೇ ವರ್ಷದ ಸಿರಿಗನ್ನಡ ಗೌರವ ಪ್ರಶಸ್ತಿ ಹಾಗೂ ಪಾರ್ವತಿ ಪಿಟಗಿಯವರು ರಚಿಸಿರುವ ‘ಪುನರುತ್ಥಾನ’ (ಕಾದಂಬರಿ) ಮತ್ತು ನಾಗೇಶ ನಾಯಕ ರಚನೆಯ ‘ಮನುಷ್ಯರಿಲ್ಲದ ನೆಲ’(ಕವನ ಸಂಕಲನ) ಕೃತಿಗಳಿಗೆ 2024ನೇ ವರ್ಷದ ಸಿರಿಗನ್ನಡ ಪುಸ್ತಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು.  

ದತ್ತಿನಿಧಿ ಪುಸ್ತಕ ಪ್ರಶಸ್ತಿ ವಿಜೇತರಾದ ರೀಟಾ ಬಣಗಾರ ‘ಮೊದಲ ಧ್ವನಿ’ ಎಲ್‌.ಎಸ್‌. ಶಾಸ್ತ್ರಿ ’ಎಂಥ ಮರುಳಯ್ಯ ಇದು ಎಂಥಾ ಮರಳೋ’ ರಾಜೇಂದ್ರಸ್ವಾಮಿ ಹಿರೇಮಠ ‘ಚಿಣ್ಣರ ಚಿಗುಳಿ’ ಮಂಜುನಾಥ ಕಳಸಣ್ಣವರ (ಗಂಡು ಮೆಟ್ಟಿನ ರಾಣಿ), ಡಾ. ವಾಯ್‌. ಎಂ. ಯಾಕೊಳ್ಳಿ ‘ಅಮೃತದ ತೊಟ್ಟು‘ ಮಧುರಾ ಕರ್ಣಂ ‘ಬೌದ್ಧಾವತಾರ’ ಎಂ. ಬಿ. ಹೂಗಾರ ‘ಭವಕೆ ಬಂದ ಬೆಳಕು’ ಸುರೇಶ ದೇಸಾಯಿ ‘ಸಾಹಿತ್ಯ ಸರಸ್ವತಿಯರು’ ಡಾ. ಪ್ರಭಾ ಬೋರಗಾಂವಕರ ‘ಹೆಣ್ಣು ಹುಣ್ಣಲ್ಲ ಹೂವು’ ಲೇಖಕರನ್ನು ವೇದಿಕೆ ಮೇಲೆ ಶಾಲು ಹೊದಿಸಿ, ನಗದು ಹಣ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 

ಸಾಧನೆ ಮತ್ತು ಸೇವೆಗಾಗಿ ನೀಡುವ ದತ್ತಿನಿದಿ ಪ್ರಶಸ್ತಿಗಳಿಗೆ ಭಾಜನರಾದ ಡಾ. ದಯಾನಂದ ನೂಲಿ (ಜೀವಮಾನ ಸಾಧನೆ), ವಿಜಯಲಕ್ಷ್ಮೀ ವೆಂಕಟೇಶ ಕುಲಕರ್ಣಿ (ಸಾಮಾಜಿಕ ಸೇವೆ), ಹಮೀದಾ ಬೇಗಂ ದೇಸಾಯಿ (ಜೀವಮಾನ ಸಾಧನೆಗಾಗಿ ಮಹಿಳೆ),  ನಿರಜಾ ಗಣಾಚಾರಿ (ಶ್ರೇಷ್ಠ ಶಿಕ್ಷಕ ಸಾಹಿತಿ), ಡಾ. ವಿ. ಎಸ್‌. ಮಾಳಿ (ವೈಚಾರಿಕ ಸಂಪನ್ಮೂಲ ವ್ಯಕ್ತಿ),   ಡಾ. ಜ್ಯೋತಿರ್ಲಿಂಗ ಹೊನಕಟ್ಟಿ (ಜನಪದ ಕಲಾವಿದ) ಇವರನ್ನು ವೇದಿಕೆ ಮೇಲೆ ಶಾಲು ಹೊದಿಸಿ, ನಗದು ಹಣ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.  

ಪ್ರತಿಷ್ಠಾನದ ‘ಸದಭಿಮಾನ’ ಸಂಚಿಕೆ ಬಿಡುಗಡೆಗೊಂಡಿತು. ಡಾ. ಪಿ. ಜಿ. ಕೆಂಪಣ್ಣವರ, ಡಾ. ಶ್ರೀಧರ ಹುಕ್ಕೇರಿ, ಭಾರತಿ ವಡವಿ ಮಾತನಾಡಿದರು. ಬೇರೆ ಬೇರೆ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ ಆಗಮಿಸಿದ್ದ  ಸಂಜೀವಿನಿ ಹುಕ್ಕೇರಿ, ಅಪೂರ್ವಾ ಕರೆಕಟ್ಟಿ, ಪ್ರೊ. ಜಿ.ಕೆ. ಕುಲಕರ್ಣಿ, ಜಿ.ಎಸ್‌. ಸೋನಾರ ಅವರನ್ನು ಗೌರವಿಸಲಾಯಿತು. 

ದೀಪಿಕಾ ಚಾಟೆ, ಡಾ. ಜಯಂತ ಕಿತ್ತೂರ, ನಾರಾಯಣ ಗಣಾಚಾರಿ, ಚಿದಂಬರ ಮುನವಳ್ಳಿ, ಅನಂತ ಗೊಣಬಾಳ ಪರಿಚಯಿಸಿದರು. ದೀಪಾ ಪದಕಿ ತಂಡದವರ ‘ಉದಯವಾಗಲಿ ಚಲುವ..’ ಗೀತೆಯೊಂದಿಗೆ ಕಾರ‌್ಯಕ್ರಮ ಪ್ರಾರಂಭವಾಯಿತು. ಶೀರೀಷ ಜೋಶಿ ಸ್ವಾಗತಿಸಿದರು . ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಂತಾ ಆಚಾರ್ಯ ನಿರೂಪಿಸಿದರು.