ಕ್ಯಾನ್ ಬೆರಾ, ಜ 30,ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡಿದ್ದ ಭೀಕರ ಕಾಡ್ಗಿಚ್ಚಿನಿಂದಾಗಿರುವ ನಷ್ಟವನ್ನು ಭರಿಸಲು ರಾಷ್ಟ್ರೀಯ ವಿಜ್ಞಾನ ಮಂಡಳಿಯ ನೆರವು ಪಡೆಯಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಭವಿಷ್ಯದಲ್ಲಿ ಕಾಡ್ಗಿಚ್ಚಿನಂತಹ ಸಮಸ್ಯೆಗಳು ಮರುಕಳಿಸದಂತೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕಾಮನ್ ವೆಲ್ತ್ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಸ್ರೋ) ಸರ್ಕಾರಕ್ಕೆ ಶಿಫಾರಸುಗಳನ್ನು ನೀಡಲಿದೆ.
ಕಳೆದ ಸೆಪ್ಟೆಂಬರ್ ನಿಂದ ಆಸ್ಟ್ರೇಲಿಯಾದ ವಿವಿಧ ರಾಜ್ಯಗಳಲ್ಲಿ ವ್ಯಾಪಕವಾಗಿ ಹರಡಿದ್ದ ಕಾಡ್ಗಿಚ್ಚಿನಿಂದ ಕನಿಷ್ಠ 33 ಜನರು ಮೃತಪಟ್ಟಿದ್ದು, ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ಕಾಡ್ಗಿಚ್ಚಿಗೆ ಕಾರಣ ಮತ್ತು ಅದನ್ನು ತಡೆಯುವ ಭವಿಷ್ಯದ ಕ್ರಮಗಳ ಕುರಿತು ತನಿಖೆ ನಡೆಸಲು ಪ್ರಧಾನಿ ಪ್ರತ್ಯೇಕ ಆಯೋಗವನ್ನು ರಚಿಸಿದ್ದಾರೆ.ಹವಾಮಾನ ಬದಲಾವಣೆಯಿಂದ ರಾಷ್ಟ್ರದಲ್ಲಿ ಕಾಡ್ಗಿಚ್ಚಿನ ಸಮಸ್ಯೆ ಎನ್ನುಷ್ಟು ತೀವ್ರವಾಗಲಿದೆ ಎಂದು ಸಿಸ್ರೋದ ಸಿಇಒ ಲಾರಿ ಮಾರ್ಷಲ್ ಹೇಳಿದ್ದಾರೆ. ಸರ್ಕಾರ ತಕ್ಷಣ ಜನರ ಜೀವಗಳನ್ನು, ಆರ್ಥಿಕತೆ ಮತ್ತು ಪರಿಸರವನ್ನು ರಕ್ಷಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಿಸ್ರೋ ಸರ್ಕಾರಕ್ಕೆ ಸಲಹೆಗಳನ್ನು ನೀಡಲಿದೆ. ಕಾಡ್ಗಿಚ್ಚು ತಡೆಯುವ ಹೊಸ ತಂತ್ರಜ್ಞಾನಗಳ ಕುರಿತು ಕೂಡ ಶಿಫಾರಸು ಮಾಡಲಿದೆ ಎಂದರು.