ನವದೆಹೆಲಿ, ಜೂನ್ ೩೦: ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರನ್ನು ಇನ್ನೂ ಒಂದು ವರ್ಷ ಹುದ್ದೆಯಲ್ಲಿ ಮುಂದುವರಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಅಟಾರ್ನಿ ಜನರಲ್ ಸ್ಥಾನದಲ್ಲಿ ತಮ್ಮನ್ನು ಮುಂದುವರಿಸದಂತೆ ಅವರು ಮನವಿ ಸಲ್ಲಿಸಿದ್ದರೂ, ಇನ್ನೊಂದು ವರ್ಷ ವೇಣುಗೋಪಾಲ್ ಅವರನ್ನು ಮುಂದುವರಿಸಿ ಆದೇಶ ಹೊರಡಿಸಿದ್ದಾರೆ. ೮೯ ವರ್ಷದ ಅತಿ ಹಿರಿಯರಾಗಿರುವ ಕೆ.ಕೆ. ವೇಣುಗೋಪಾಲ್ ಅವರು ಇನ್ನೊಂದು ವರ್ಷ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸಿದರೆ ೯೦ ವರ್ಷ ವಯಸ್ಸು ಪೂರೈಸುವ ನಿರೀಕ್ಷೆಯಿದೆ. ಅಟಾರ್ನಿ ಜನರಲ್ ಆಗಿ ವೇಣುಗೋಪಾಲ್ ಮೂರು ವರ್ಷಗಳ ಅವಧಿ ಮಂಗಳವಾರ ಕೊನೆಗೊಳ್ಳಲಿದೆ.
ಇನ್ನೂ ಮೂರು ವರ್ಷಗಳ ಅವಧಿಗೆ ಮುಂದುವರಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದರೂ, ತಮ್ಮ ವಯಸ್ಸು ದೃಷ್ಟಿಯಲ್ಲಿಟ್ಟುಕೊಂಡು ಒಂದು ವರ್ಷ ಮಾತ್ರ ಮುಂದುವರಿವುದಾಗಿ ಅವರು ಹೇಳಿದ್ದಾರೆ. ಇದರಂತೆ ಜುಲೈ ೧ರಿಂದ ಒಂದು ವರ್ಷ ಆಟಾರ್ನಿ ಜನರಲ್ ಆಗಿ ಅವರು ಮುಂದುವರಿಯಲಿದ್ದಾರೆ. ಜೊತೆಗೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಅಧಿಕಾರಾವಧಿಯನ್ನು ಮೂರು ವರ್ಷಗಳ ಕಾಲ ವಿಸ್ತರಿಸಲು ನೇಮಕಾತಿ ಕುರಿತ ಸಂಪುಟ ಸಮಿತಿ ನಿರ್ಧರಿಸಿದೆ. ಉಳಿದ ಐವರು ಹೆಚ್ಚುವರಿ ಸಾಲಿಸಿಟರ್ ಜನರಲ್‌ಗಳಾದ ವಿಕ್ರಮ್ ಜಿತ್ ಬ್ಯಾನರ್ಜಿ, ಸಂಜಯ್ ಜೈನ್, ಕೆಎಂ ನಟರಾಜ್, ಮಾಧವಿ ದಿವಾನ್ ಮತ್ತು ಅಮನ್ ಲೆಖಿ ಅವರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.