ಬೆಂಗಳೂರು, ಅ15: ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿಚಾರಣೆಗೆ ಹಾಜರಾದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಯಲ್ಲಿ ಸುಮಾರು ಎರಡೂ ತಾಸು ವಿಚಾರಣೆ ನಡೆಯಿತು. ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಸಿಕ್ಕ ದಾಖಲೆ ಪತ್ರಗಳು, ಕೋಟ್ಯಂತರ ರೂ ಹಣ ಮತ್ತಿತರ ಅಕ್ರಮಗಳ ಬಗ್ಗೆ ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದರು.
ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಪರಮೇಶ್ವರ್, ಇನ್ನು ಕೆಲವು ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ತಾವು ಈಗಷ್ಟೇ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ನೋಡಿಕೊಳ್ಳುತ್ತಿದ್ದು, ತಮ್ಮಲ್ಲಿ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ವಿಚಾರಣೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ತಮ್ಮ ಆಪ್ತ ರಮೇಶ್ ಆತ್ಮಹತ್ಯೆ ಪ್ರಕರಣವನ್ನು ವಿಶೇಷವಾಗಿ ತನಿಖೆ ನಡೆಸುವ ಅವಶ್ಯಕತೆ ಇದೆ. ರಮೇಶ್ ಅವರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದೇನೆ. ಹೀಗಾಗಿ ನಾನೇ ಕೊಲೆ ಮಾಡಿಸಿದ್ದೇನೆ ಎಂದು ಕೆಲವರು ನನ್ನ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ. ಇಂತಹ ಸುಳ್ಳು ಆರೋಪಗಳಿಂದ ಮನಸಿಗೆ ಬಹಳ ನೋವಾಗಿದೆ. ಇಂತಹ ಆರೋಪಗಳು ಸಹಿಸಲು ಸಾಧ್ಯವಿಲ್ಲ. ಸತ್ಯಾಸತ್ಯತೆ ಪತ್ತೆಗಾಗಿ ರಮೇಶ್ ಸಾವಿನ ಬಗ್ಗೆ ವಿಶೇಷ ತನಿಖೆ ನಡೆಸುವ ಅಗತ್ಯವಿದೆ ಎಂದರು.
ರಮೇಶ್ ಯಾವ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡ ಎನ್ನುವುದನ್ನು ನಾನು ತಿಳಿದುಕೊಳ್ಳಬೇಕು. ಈ ಪ್ರಕರಣವನ್ನು ವಿಶೇಷ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಮನವಿ ಮಾಡುವುದಾಗಿ ಸ್ಪಷ್ಟಪಡಿಸಿದರು.
ಐಟಿ ವಶಕ್ಕೆ ಪಡೆದಿದ್ದ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಅವರಿಗೂ ಸ್ವಲ್ಪ ಕಾಲಾವಕಾಶ ಬೇಕು.
ಅದಕ್ಕಾಗಿ ನಾನು ಮೂರು ನಾಲ್ಕು ದಿನಕಾಲಾವಕಾಶ ಕೇಳಿದ್ದೇನೆ. ಮೂರು ದಿನದ ಬಳಿಕ ಸಮನ್ಸ್ ನೀಡಿದರೆ ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ ಎಂದರು.