ಧರಣಿ ಸ್ಥಳಕ್ಕೆ ಕೆಬಿಜೆಏನ್‌ಎಲ್ ಎಸ್‌ಇ ಗೋವಿಂದ್ ರಾಥೋಡ ಭೇಟಿ

ಧರಣಿ ಸ್ಥಳಕ್ಕೆ  ಕೆಬಿಜೆಏನ್‌ಎಲ್ ಎಸ್‌ಇ  ಗೋವಿಂದ್ ರಾಥೋಡ ಭೇಟಿ  Attempts to persuade the farmers failed and the sit-in continued

ರೈತರ ಮನವೊಲಿಕೆ ಪ್ರಯತ್ನ ವಿಫಲ ಮುಂದುವರಿದ ಧರಣಿ 

ತಾಳಿಕೋಟಿ 18: ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಯ ಅಂತಿಮ ಹಂತದ ಎಫ್‌ಐಸಿ( ಹೊಲಗಾವಲು)ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕೊಡಗಾನೂರು ಕ್ರಾಸ್ ಹತ್ತಿರ 38 ಗ್ರಾಮಗಳ ರೈತರು ಕಳೆದ ಏಳು ದಿನಗಳಿಂದ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಶುಕ್ರವಾರ ಕೆಬಿಜೆಏನ್‌ಎಲ್ ಎಸ್ ಇ ಗೋವಿಂದ್ ರಾಠೋಡ ಭೇಟಿ ನೀಡಿದರು. 

ರೈತರೊಂದಿಗೆ ಮಾತುಕತೆ ನಡೆಸಿದ ಅವರು ಈಗಾಗಲೇ ತಮ್ಮ ಹೋರಾಟದ ಪರಿಣಾಮವಾಗಿ ವ್ಯವಸ್ಥಾಪಕ ನಿರ್ದೇಶಕರು ಯೋಜನೆಯ ಅಂತಿಮ ಹಂತದ ಕಾಮಗಾರಿಯ ಡಿಪಿಆರ್ ತಯಾರಿಸುವ ಸಲುವಾಗಿ ಸಮಾಲೋಚಕರನ್ನು ನೇಮಿಸುವ ಕಾರ್ಯಕ್ಕೆ ಅಂದಾಜು 1.75 ಕೋಟಿ ಮೊತ್ತದ ಟೆಂಡರ್ ಕರೆಯಲು ಅನುಮೋದನೆಗಾಗಿ ಸರ್ಕಾರಕ್ಕೆ ಕೋರಲಾಗಿದೆ ಆದ್ದರಿಂದ ತಾವು ಧರಣಿಯನ್ನು ಕೈ ಬಿಡಬೇಕು ಎಂದು ಮನವೊಲಿಕೆಗೆ ಪ್ರಯತ್ನಿಸಿದರಾದರೂ ರೈತರು ಇದಕ್ಕೆ ಒಪ್ಪಲಿಲ್ಲ. ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಮಾತನಾಡಿ ಯೋಜನೆಯ ಅಂತಿಮ ಹಂತದ ಹೊಲಗಾವಲು ಕಾಮಗಾರಿಗೆ ಚಾಲನೆ ನೀಡುವವರೆಗೂ ಈ ಹೋರಾಟವನ್ನು ನಿಲ್ಲಿಸುವುದಿಲ್ಲ ಸರ್ಕಾರ ಇದೇ ರೀತಿಯ ನಿರ್ಲಕ್ಷ ಧೋರಣೆ ತೋರಿದಲ್ಲಿ ಮುಂದಿನ ದಿನಗಳಲ್ಲಿ ಆಮರಣ ಉಪವಾಸ ಆರಂಭಿಸುತ್ತೇವೆ ಇದಕ್ಕೆ ಸರ್ಕಾರವೇ ಕೊನೆಯಾಗಬೇಕಾಗುತ್ತದೆ.  

ಕಳೆದ ಏಳು ದಿನಗಳಿಂದ ನಡೆಸುತ್ತಿರುವ ಈ ಹೋರಾಟ ಸ್ಥಳಕ್ಕೆ ಇಲ್ಲಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬಂದಿಲ್ಲ ಅಂದರೆ ಇವರಿಗೆ ರೈತರ ಕುರಿತು ಎಷ್ಟು ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ ಇದೊಂದು ಪಕ್ಷಾತೀತವಾಗಿ ರೈತರು ನೀರಿಗಾಗಿ ನಡೆಸುತ್ತಿರುವ ಹೋರಾಟ ನಮ್ಮ ಬೇಡಿಕೆ ಕೇವಲ ಈ ಯೋಜನೆಯ ಅಂತಿ ಹಂತದ ಶೇ.10 ರಷ್ಟು ಕಾಮಗಾರಿಗಾಗಿದೆ ಇದಕ್ಕೆ ಬೇಕಾಗಿರುವುದು ಕೇವಲ 170 ರಿಂದ 200 ಕೋಟಿ ಅನುದಾನ ಮಾತ್ರ ಈ ಸಣ್ಣ ಕಾರ್ಯವನ್ನು ಮಾಡಲು ಇವರಿಗೆ ಆಗುತ್ತಿಲ್ಲವೆಂದಾದರೆ ಇವರು ಅಧಿಕಾರದಲ್ಲಿ ಏಕೆ ಇರಬೇಕು, ಇವರು ಕೇವಲ ಬಬಲೇಶ್ವರ ಮತ ಕ್ಷೇತ್ರದ ಉಸ್ತುವಾರಿಗಳಾ ಅಥವಾ ಜಿಲ್ಲಾ ಉಸ್ತುವಾರಿಗಳಾ ಎಂಬುದು ಸ್ಪಷ್ಟಪಡಿಸಬೇಕು ಅವರಿಗೆ ತಮ್ಮ ರೈತ ವಿರೋಧಿ ಧೋರಣೆಯನ್ನು ಬಿಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಹೋರಾಟವನ್ನು ಅವರ ಮನೆಯ ಮುಂದೆ ನಡೆಸಿ ಅವರಿಗೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಸಿದ ಅವರು ಈ ಹೋರಾಟ ಮುಂದುವರಿಯಲಿದೆ ಎಂದರು. ಈ ಸಮಯದಲ್ಲಿ ಪ್ರಗತಿಪರ ರೈತ ಪ್ರಭುಗೌಡ ಬಿರಾದಾರ ಅಸ್ಕಿ, ಬಸನಗೌಡ ಯಾಳವರ, ಬಸನಗೌಡ ಪಾಟೀಲ, ಸುರೇಶಕುಮಾರ ಇಂಗಳಗೇರಿ, ಸಂತೋಷ ಚೌದರಿ,ನಾನಾ ಗೌಡ ಬಿರಾದಾರ,ರಾಯಪ್ಪಗೌಡ ಪಾಟೀಲ, ಶಂಕರಗೌಡ ದೇಸಾಯಿ, ಬಾಪುಗೌಡ ಪಾಟೀಲ, ಗುರುರಾಜ ಪಡಶೆಟ್ಟಿ, ಶಿವಪುತ್ರ ಚೌದ್ರಿ, ಡಾ. ಪ್ರಭುಗೌಡ ಬಿರಾದಾರ, ಸುಭಾಷ ನಡುವಿನಮನಿ, ರೇವಣಪ್ಪ ವಾಲಿಕಾರ, ಜಂಬೂ ಚೀನಿವಾಲ, ಸಾವು ಮಹಾನಿಂಗ ಬೂದಿ, ಮಡಿವಾಳಪ್ಪ ಕಲಬುರ್ಗಿ, ರವಿ ಯಾಳವರ ರಾಜು ಚೌದರಿ, ಬೀರ​‍್ಪ ಜಿ ಮತ್ತಿತರರು ಇದ್ದರು.