ಕೇಸರೊಳ್ಳಿಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಕೇಸರೊಳ್ಳಿಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ  Assault on an individual in Kesarahalli: Demand for strict action against the accused.

ಕಾರವಾರ 25: ಹಳಿಯಾಳ ತಾಲೂಕಿನ ಕೇಸರೊಳ್ಳಿ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಗಣಪತಿ ಸಹದೇವ ಕರಂಜೇಕರ್ ಹಾಗೂ ಅವರ ಕುಟುಂಬಸ್ಥರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.  

ಗಣಪತಿ ಕರಂಜೇಕರ್, ಆತನ ಸಹಚರರು ಹಾಗೂ ಕುಟುಂಬಸ್ಥರು ಸೇರಿಕೊಂಡು ಮಿನ್ ಸೋಜ್ ಎಂಬುವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಗೆ ಹಳಿಯಾಳ ತಾಲೂಕಿನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.  

ಸಣ್ಣ ಕಾರಣಕ್ಕೆ ನಡೆದ ಈ ಹಲ್ಲೆ ಪ್ರಕರಣವನ್ನು ಖಂಡಿಸಿರುವ ಕೇಸರೊಳ್ಳಿ ಗ್ರಾಮದ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಮುಖಂಡರು ಸೇರಿದಂತೆ ಗ್ರಾಮಸ್ಥರು ತಹಶೀಲ್ದಾರ್ ಫಿರೋಜ್ ಶಾ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

ಆರೋಪಿ ಗಣಪತಿ ಕರಂಜೇಕರ್ ಹಳಿಯಾಳ ಪೊಲೀಸ್ ಠಾಣೆಯ ರೌಡೀಶೀಟರ್ ಆಗಿದ್ದು, ಅವರ ವಿರುದ್ಧ ಕೊಲೆ ಯತ್ನ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.  

ಮಾಜಿ ಶಾಸಕ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ, ಹಾಲಿ ಶಾಸಕ ಹಾಗೂ ಸಂಸದರನ್ನು ಗ್ರಾಮಸ್ಥರು ಭೇಟಿ ಮಾಡಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.  “ಇಂತಹ ಗೂಂಡಾಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.