ಗ್ರಾಮೀಣ ಭಾಗದ ರೈತರಿಗೆ ನಿರಂತರ ವಿದ್ಯುತ್ ನೀಡಲು ಅಶ್ವತ್ಥನಾರಾಯಣ ಒತ್ತಾಯ

ಬೆಂಗಳೂರು, ಏ.17, ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗುತ್ತಿದ್ದು, ಇದನ್ನು ಗ್ರಾಮೀಣ ಭಾಗದ ರೈತರಿಗೆ ನಿರಂತರ ವಿದ್ಯುತ್ ನೀಡಿದರೆ ಅವರಿಗೆ ಅನುಕೂಲವಾಗಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ದೇಶಾದ್ಯಂತ ಕೊರೋನಾ ಮಾರಕ ರೋಗದಿಂದ ಇಡೀ ದೇಶದಲ್ಲಿ ಲಾಕ್‌ಡೌನ್‌ ಆಗಿರುವ ಕಾರಣ ರಾಜ್ಯದಲ್ಲಿ ಎಲ್ಲಾ ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆಗಳು ಸ್ಥಗಿತವಾಗಿವೆ. ಈ ಕಾರಣದಿಂದ ರಾಜ್ಯದಲ್ಲಿ ತಕ್ಷಣಕ್ಕೆ ಅವಶ್ಯಕತೆಗಿಂತ ಹೆಚ್ಚು ವಿದ್ಯುತ್ ಇರುವುದು  ತಮಗೆ ತಿಳಿದಿದೆ.

ಇಂಧನ ಇಲಾಖೆಯು ತಮ್ಮ ವ್ಯಾಪ್ತಿಯಲ್ಲಿ ಇರುವುದರಿಂದ 4 ಗಂಟೆ ಒಂದು ಸಮಯದಲ್ಲಿ, 3 ಗಂಟೆ ಒಂದು ಸಮಯದಲ್ಲಿ ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ವಿದ್ಯುತ್ ನೀಡಲಾಗುತ್ತಿದೆ. ರಾಜ್ಯದಲ್ಲಿ ಹೆಚ್ಚು ವಿದ್ಯುತ್ ಹೆಚ್ಚುವರಿ ಇರುವುದರಿಂದ 10 ಗಂಟೆಗೂ ಹೆಚ್ಚು ವಿದ್ಯುತ್‌ ಅನ್ನು ರಾತ್ರಿ ಸಮಯದ ಬದಲು ಹಗಲು ಸಮಯದಲ್ಲಿ ಗ್ರಾಮೀಣ ಭಾಗದ ರೈತರಿಗೆ ನೀಡಿದರೆ ಸೂಕ್ತ. ಈಗಾಗಲೇ ತರಕಾರಿ, ಹಣ್ಣು ಹೂವು ಬೆಳೆಗಾರರು ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಿರಂತರ ವಿದ್ಯುತ್‌ ಹಗಲು ಸಮಯದಲ್ಲಿ ಗ್ರಾಮೀಣ ರೈತರಿಗೆ ನೀಡಿದರೆ ಅನುಕೂಲವಾಗಲಿದೆ. ಆದ್ದರಿಂದ ರೈತರ ಪರ ಇರುವ ತಾವು ಇದಿನ್ನು ಕಾರ್ಯಗತಗೊಳಿಸಬೇಕು ಎಂದು  ಅಶ್ವತ್ಥನಾರಾಯಣ ಪತ್ರದಲ್ಲಿ ಒತ್ತಾಯಿಸಿದ್ದಾರೆ.