ತಲೆಯ ಮೇಲೆ ಅಶೋಕ ಸ್ತಂಭದ ಲಾಂಛನ: ದೇಶಪ್ರೇಮ ಸಾರುತ್ತಿರುವ ಜಗದೀಶ ಹಡಪದ

ತಲೆಯ ಮೇಲೆ ಅಶೋಕ ಸ್ತಂಭದ ಲಾಂಛನ: ದೇಶಪ್ರೇಮ ಸಾರುತ್ತಿರುವ ಜಗದೀಶ ಹಡಪದ  Ashoka Pillar emblem atop the head: Jagadeesha Hadapada proclaiming patriotism


ರಾಣೆಬೆನ್ನೂರು, ಆ.14: ಭಾರತ ದೇಶವು ಸ್ವಾತಂತ್ರ್ಯ ಪಡೆದ ನಂತರವೂ ತನ್ನದೇ ಆದ ಆಚಾರ, ವಿಚಾರ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಅಳವಡಿಸಿಕೊಂಡು ವೇದ-ಇತಿಹಾಸ ಕಾಲದಿಂದಲೂ ವಿಶಿಷ್ಟ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ದೇಶಾಭಿಮಾನ, ಕರ್ನಾಟಕದಲ್ಲಿ ಕನ್ನಡಾಭಿಮಾನ ಹಾಗೂ ಹಬ್ಬ-ಹರಿದಿನ, ಜಾತ್ರೆ-ಉತ್ಸವಗಳ ಸಂದರ್ಭದಲ್ಲಿ ಭಾರತೀಯರು ತಮ್ಮದೇ ಆದ ರೀತಿಯಲ್ಲಿ ದೇಶ ಹಾಗೂ ನಾಡಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.  

ಅದೇ ರೀತಿ ಕಳೆದ 30 ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವ ಮೂಲಕ ಗಮನ ಸೆಳೆಯುತ್ತಿರುವ ರಾಣೆಬೆನ್ನೂರಿನ ಜಗದೀಶ ನಿಂಗಪ್ಪ ಹಡಪದ ಅವರು ಈ ಬಾರಿಯೂ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ವಿಶಿಷ್ಟ ರೀತಿಯಲ್ಲಿ ನಾಂದಿ ಹಾಡಿದ್ದಾರೆ.  

ಜಗದೀಶ ಹಡಪದ ಅವರು ತಮ್ಮ ತಲೆಯ ಕೂದಲನ್ನು ಸೂಕ್ಷ್ಮ ಕೌಶಲ್ಯದಿಂದ ಕತ್ತರಿಸಿಕೊಂಡು, ತಲೆಯ ಹಿಂಭಾಗದ ಮಧ್ಯಭಾಗದಲ್ಲಿ ಭಾರತದ ಅಶೋಕ ಸ್ತಂಭದ ಲಾಂಛನದ ಚಿತ್ರ ಮೂಡುವಂತೆ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಈ ಮೂಲಕ ತಮ್ಮದೇ ಆದ ರೀತಿಯಲ್ಲಿ ದೇಶಪ್ರೇಮವನ್ನು ಮೆರೆದಿದ್ದಾರೆ.  

ಜಗದೀಶ ಹಡಪದ ಅವರ ಈ ದೇಶಪ್ರೇಮದ ಕಾರ್ಯಕ್ಕೆ ನಗರ ಹಾಗೂ ಜಿಲ್ಲೆಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿ, ಅವರನ್ನು ಅಭಿನಂದಿಸಿದ್ದಾರೆ.  ಮೂಲತಃ ರಾಣೆಬೆನ್ನೂರು ತಾಲ್ಲೂಕಿನ ಮಾಕೋಡು ಗ್ರಾಮದ 52 ವರ್ಷದ ಜಗದೀಶ ಹಡಪದ ಅವರು ಬಾಲ್ಯದಿಂದಲೇ ದೇಶದ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ರಾಣೆಬೆನ್ನೂರು ನಗರದಲ್ಲಿ ವಾಸವಾಗಿರುವ ಅವರು, ವೃತ್ತಿಯಲ್ಲಿ ಕ್ಷೌರಿಕರಾಗಿದ್ದು, ಪ್ರಸ್ತುತ ಗೃಹರಕ್ಷಕ ದಳದಲ್ಲಿ (ಹೋಮ್ ಗಾರ್ಡ) ಸೇವೆ ಸಲ್ಲಿಸುತ್ತಿದ್ದಾರೆ.  

ತಲೆಯ ಮೇಲೆ ಭಾರತದ ಅಶೋಕ ಲಾಂಛನದ ಚಿತ್ರವನ್ನು ಮೂಡಿಸಿಕೊಂಡು ಕಳೆದ ಒಂದು ವಾರದಿಂದ ನಗರದ ವಿವಿಧೆಡೆ ಸಂಚರಿಸುತ್ತಿರುವ ಅವರು, 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕರಲ್ಲಿ ದೇಶಪ್ರೇಮ ಹಾಗೂ ಸ್ವಾತಂತ್ರ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಈ ವಿಶಿಷ್ಟ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.