ಬಳ್ಳೊಳ್ಳಿ, ಲಾಳಸಂಗಿ, ಹಿರೇಬೆವನೂರ ಗ್ರಾಪಂಗಳಿಗೆ ಅರುಣಕುಮಾರ ದಳವಾಯಿ ಭೇಟಿ
Arunkumar Dalavai visits Ballolli, Lalasangi, and Hirebevanur Gram Panchayats
ಇಂಡಿ 14 : ತಾಲ್ಲೂಕಿನ ಬಳ್ಳೊಳ್ಳಿ, ಲಾಳಸಂಗಿ ಹಾಗೂ ಹಿರೇಬೆವನೂರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್ಜಿ ಯೋಜನೆಯಡಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳ ಸ್ಥಳಗಳಿಗೆ ವಿಜಯಪುರ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಭೇಟಿ ನೀಡಿ ಪರೀಶೀಲಿಸಿದರು. ಬಳ್ಳೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ ಪುನಶ್ಚೇತನ ಕಾಮಗಾರಿಯನ್ನು ವೀಕ್ಷಿಸಿದ ಅವರು, 100ರಿಂದ 150 ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಿದರು. ನಂತರ ಹಿರೇಬೆವನೂರ ಹಾಗೂ ಲಾಳಸಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಲುವೆ ಮತ್ತು ಕೆನಾಲ್ ಪುನಶ್ಚೇತನ ಕಾಮಗಾರಿಗಳನ್ನು ಪರೀಶೀಲಿಸಿದರು.
ಗ್ರಾಮೀಣ ಕಾರ್ಮಿಕರಿಗೆ ನಿರಂತರ ಉದ್ಯೋಗ, ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಕೂಲಿ ಪಾವತಿಯಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆಯಡಿ 125 ದಿನಗಳ ಉದ್ಯೋಗ ಹಾಗೂ ದಿನಕ್ಕೆ ರೂ382 ಕೂಲಿ ಸೌಲಭ್ಯ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಿ, ಅರ್ಹ ಕುಟುಂಬಗಳು ಉದ್ಯೋಗದಿಂದ ವಂಚಿತವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ನಂತರ ಇಂಡಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಯೋಜನೆಯ ತಾಲೂಕು ಪಂಚಾಯಿತಿ ಸಿಬ್ಬಂದಿಯ ಪ್ರಗತಿ ಪರೀಶೀಲನಾ ಸಭೆ ನಡೆಸಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕರು ಯೋಜನೆಯಡಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ರೈತರಿಗೆ ಯೋಜನೆಯ ಕುರಿತು ಮಾಹಿತಿ ನೀಡಿ, ಅರ್ಹ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸ ಆರಂಭಿಸುವಂತೆ ಸೂಚಿಸಿದರು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಪ್ರಗತಿಯನ್ನೂ ಪರೀಶೀಲಿಸಿದ ಅವರು, ಸ್ವಸಹಾಯ ಸಂಘಗಳ ವಹಿವಾಟು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಚಟುವಟಿಕೆಗಳ ಕುರಿತು ಚರ್ಚಿಸಿದರು. ಸ್ವಸಹಾಯ ಸಂಘದ ಸದಸ್ಯರ ಇ-ಕೆವೈಸಿ ಶೇ.100ರಷ್ಟು ಪೂರ್ಣಗೊಳಿಸುವಂತೆ ಹಾಗೂ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 25 ಸ್ವಸಹಾಯ ಸಂಘಗಳನ್ನು ರಚಿಸುವಂತೆ ಸೂಚಿಸಿದರು.
ತಾಲೂಕಿನಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಜಾರಿಯಲ್ಲಿರುವ ವಿಬಿ-ಜಿ ರಾಮ್ಜಿ ಯೋಜನೆಯಡಿ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಸ್ವಸಹಾಯ ಸಂಘಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಕಾರ್ಮಿಕರು ಯೋಜನೆಯಡಿ ಕೆಲಸಕ್ಕೆ ಬರುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು. ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಸಂಜಯ ಖಡೆಗೆಕರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಟಿಎಂಐಎಸ್ ಆಡಳಿತ ಸಹಾಯಕರು, ಎನ್ಆರ್ಎಲ್ಎಂ ಸಿಬ್ಬಂದಿ, ವಲಯ ಮೇಲ್ವಿಚಾರಕರು, ಬಿಎಫ್ಟಿ, ಗ್ರಾಮ ಕಾಯಕ ಮಿತ್ರರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 