ಶಾಲಾ ಮಕ್ಕಳಿಗೆ ಕೃತಕವಾಗಿ ಮಾಗಿಸಿದ ಬಾಳೆಹಣ್ಣು: ಸಮಿತಿ ಆಕ್ರೋಶ

ಶಾಲಾ ಮಕ್ಕಳಿಗೆ ಕೃತಕವಾಗಿ ಮಾಗಿಸಿದ ಬಾಳೆಹಣ್ಣು: ಸಮಿತಿ ಆಕ್ರೋಶ  Artificially ripened bananas for schoolchildren: Committee outraged

ಕೊಪ್ಪಳ  01: ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಕೃತಕವಾಗಿ ಮಾಗಿಸಿದ ಅಪಕ್ವ ಬಾಳೆಹಣ್ಣುಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿರುವ ಶಾಲಾ-ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿ, ಕೂಡಲೇ ವಿತರಣೆಯನ್ನು ತಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದೆ.  

ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಚುನಾವಣಾ ಶಾಖಾ ತಹಶೀಲ್ದಾರ್ ರವಿಕುಮಾರ್ ವಸ್ತ್ರದ ಸೇರಿದಂತೆ ವಿವಿಧ ಉನ್ನತಾಧಿಕಾರಿಗಳಿಗೆ ಸಮಿತಿ ಸದಸ್ಯರು ಮಂಗಳವಾರ ಮನವಿ ಸಲ್ಲಿಸಿದರು.  

ಬಾಳೆಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಬಳಸಲಾಗುವ ಕ್ಯಾಲ್ಸಿಯಂ ಕಾರ್ಬೈಡ್ ಹಾಗೂ ಇತರ ರಾಸಾಯನಿಕಗಳಿಂದ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಸಮಿತಿ ತಿಳಿಸಿದೆ. ಹೊರನೋಟಕ್ಕೆ ಹಳದಿಯಾಗಿ ಕಂಡರೂ ಒಳಭಾಗದಲ್ಲಿ ಹಸಿಯಾಗಿರುವ ಇಂತಹ ಹಣ್ಣುಗಳನ್ನು ಮಕ್ಕಳಿಗೆ ವಿತರಿಸುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.  

ಜಿಲ್ಲೆಯ ಎಲ್ಲ ಶಾಲೆಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಹಣ್ಣುಗಳ ಗುಣಮಟ್ಟ ಪರೀಶೀಲಿಸಬೇಕು. ಕೃತಕವಾಗಿ ಮಾಗಿಸಿದ ಹಣ್ಣುಗಳನ್ನು ಪೂರೈಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ಪರವಾನಗಿ ರದ್ದುಪಡಿಸಬೇಕು. ಶಾಲೆಗಳಿಗೆ ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನೇ ಪೂರೈಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ.  

ಸಮಿತಿಯ ಅಧ್ಯಕ್ಷ ಎಸ್‌.ಎ. ಗಫಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್, ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ತುಕಾರಾಮ್ ಪಾತ್ರೋಟಿ, ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮಖಬೂಲ್ ರಾಯಚೂರು ಹಾಗೂ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ಸಂಘರ್ಷ ಬಿ. ಶೀಲವಂತರ್, ಆದಿತ್ಯ ಟಿ. ಪಾತ್ರೋಟಿ ಮತ್ತಿತರರು ಮನವಿಗೆ ಬೆಂಬಲಿಸಿದರು.  

ಮಕ್ಕಳ ಆರೋಗ್ಯದೊಂದಿಗೆ ಯಾವುದೇ ರೀತಿಯ ನಿರ್ಲಕ್ಷ್ಯ ತೋರದೆ, ಕೃತಕವಾಗಿ ಮಾಗಿಸಿದ ಬಾಳೆಹಣ್ಣುಗಳ ಪೂರೈಕೆಯನ್ನು ತಕ್ಷಣವೇ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.