ರಾತ್ರೋ ರಾತ್ರಿ ಪಕ್ಷದ ನಾಯಕನ ಬಂಧನ; ಯೋಗಿ ಸರ್ಕಾರದ ಕ್ರಮಕ್ಕೆ ಪ್ರಿಯಾಂಕ ಗಾಂಧಿ ಕೆಂಡಾಮಂಡಲ

ಲಕ್ನೋ, ಜೂನ್ ೩೦:  ಕಳೆದ ವರ್ಷದ ಡಿಸೆಂಬರ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ   ಆರೋಪದ  ಮೇಲೆ   ಪಕ್ಷದ ಹಿರಿಯ ನಾಯಕರೊಬ್ಬರನ್ನು  ಲಕ್ನೋದಲ್ಲಿ  ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು  ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಮಂಗಳವಾರ  ಟೀಕಿಸಿದ್ದಾರೆ.ಲಕ್ನೋ ಪೊಲೀಸರು  ಸೋಮವಾರ ಮಧ್ಯರಾತ್ರಿ  ಉತ್ತರ ಪ್ರದೇಶ ಕಾಂಗ್ರೆಸ್  ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥ ಶಹನವಾಜ್ ಆಲಂ ಅವರನ್ನು   ಸಿಎಎ ವಿರೋಧಿ ಪ್ರತಿಭಟನೆಯಲ್ಲಿ  ಭಾಗಿಯಾಗಿದ್ದ  ಆರೋಪ ಸಂಬಂಧ ವಶಕ್ಕೆ ಪಡೆದುಕೊಂಡಿದ್ದರು.ಆಲಂ  ಅವರ  ಬಂಧನವನ್ನು ಪ್ರಜಾಪ್ರಭುತ್ವ ವಿರೋಧಿ,  ಬಿಜೆಪಿ ಸರ್ಕಾರದ ಅರಾಜಕತಾವಾದ ಎಂದು  ಬಣ್ಣಿಸಿರುವ   ಪ್ರಿಯಾಂಕ ಗಾಂಧಿ.  ಕಾಂಗ್ರೆಸ್ ನಾಯಕರು,ಕಾರ್ಯಕರ್ತರು  ಜನಸಾಮನ್ಯರ ಸಮಸ್ಯೆಗಳ ಪ್ರತಿಭಟನೆ ನಡೆಸುತ್ತಿದ್ದಾರೆ.   ಆದರೆ, ರಾಜ್ಯ  ಸರ್ಕಾರ  ರಾಜಕೀಯ ನಾಯಕರನ್ನು ರಾತ್ರೋ ರಾತ್ರಿ ಬಂಧಿಸುವ   ಇಂತಹ  ಕ್ರಮಗಳು    ಸ್ವೀಕಾರಾರ್ಹವಲ್ಲ ಎಂದು ಟ್ವೀಟ್  ಮಾಡಿದ್ದಾರೆ. 

ಯೋಗಿ  ಅದಿತ್ಯನಾಥ್   ಸರ್ಕಾರ  ಜನರ ದನಿಯನ್ನು  ಅಡಗಿಸಲು  ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು  ದುರದೃಷ್ಟಕರ.  ಮಧ್ಯ ರಾತ್ರಿ ನಮ್ಮ ಪಕ್ಷದ  ನಾಯಕನನ್ನು ಬಂಧಿಸಿದ  ಕ್ರಮವನ್ನು  ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು  ಅವರು ಹೇಳಿದ್ದಾರೆ.ನಕಲಿ  ಪ್ರಕರಣವೊಂದರಲ್ಲಿ  ಮೊದಲು  ನಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನು ಒಂದು ತಿಂಗಳ ಕಾಲ  ಜೈಲಿನಲ್ಲಿರಿಸಿದ್ದರು.  ಈಗ ಮತ್ತೊಬ್ಬ ನಾಯಕರ ಸರದಿಯಾಗಿದ್ದು, ಕಾಂಗ್ರೆಸ್ಸಿಗರು ಇಂತಹ ಕಿರುಕುಳಗಳಿಗೆ   ಹೆದರುವುದಿಲ್ಲ ಬಿಜೆಪಿ ಸರ್ಕಾರದ  ವೈಫಲ್ಯಗಳ ವಿರುದ್ದ  ಹೋರಾಟ ಮುಂದುವರಿಸಲಿದ್ದಾರೆ  ಎಂದು ವಾದ್ರಾ ಹೇಳಿದ್ದಾರೆ.ಆದರೆ,   ಡಿಸೆಂಬರ್  ೧೯ರಂದು ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಲಕ್ನೋದಲ್ಲಿ  ನಡೆದ ಹಿಂಸಾಚಾರದಲ್ಲಿ  ಶಹನವಾಜ್ ಆಲಂ  ಭಾಗಿಯಾಗಿರುವುದಕ್ಕೆ  ಸಾಕಷ್ಟು   ಸಾಕ್ಷ್ಯಗಳಿರುವ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಲಕ್ನೋ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.