ನಕಲಿ ಪಾಸ್ ಮಾರಾಟ ಮಾಡುತ್ತಿದ್ದವರ ಬಂಧನ

ಬೆಂಗಳೂರು, ಏ.12,ಪೊಲೀಸ್ ನಕಲಿ ಪಾಸ್ ಸೃಷ್ಟಿಸಿ ದುರ್ಬಳಕೆ ಮಾಡುತ್ತಿದ್ದ ಆರು ಜನರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಕೊರೊನಾ  ವೈರಸ್​ ನಿಯಂತ್ರಿಸಲು ಲಾಕ್​​ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ತುರ್ತು  ಸಂದರ್ಭಗಳಲ್ಲಿ ಉಪಯೋಗಿಸಿಕೊಳ್ಳಲು ಪೊಲೀಸರು ಪಾಸ್​ ವಿತರಣೆ ಮಾಡಿದ್ದಾರೆ. ಇದನ್ನೇ  ಕೇಂದ್ರಿಕರಿಸಿಕೊಂಡು ಕೆಲವರು ನಕಲಿ ಪಾಸ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು.ಬಂಧಿತರನ್ನು ನದೀಂ  ಪಾಷಾ, ಮುಹಮ್ಮದ್ ಅಬ್ದುಲ್ ರೆಹಮಾನ್, ಮುಹಮ್ಮದ್ ಜುನೈದ್ ಖುರೇಷಿ, ಮುಹಮ್ಮದ್ ರಾಖೀಬ್  ಹಾಗೂ ಇರ್ಷಾದ್ ಪಾಷಾ ಮತ್ತು ಜಬೀವುಲ್ಲಾ ಖಾನ್ ಎಂದು ಗುರುತಿಸಲಾಗಿದೆ.ಬಂಧಿತರಿಂದ  ಕೃತ್ಯಕ್ಕೆ ಬಳಸಿದ್ದ ನಕಲಿ‌ ಪಾಸ್, ಮಾರುತಿ ಒಮ್ನಿ ವ್ಯಾನ್, ದ್ವಿಚಕ್ರ ವಾಹನ ಸೇರಿ  ಕಲರ್ ಪ್ರಿಂಟರ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು  ಕೆಜಿ ಹಳ್ಳಿ ಗಾಂಧಿನಗರ ನಿವಾಸಿಗಳಾಗಿದ್ದು, ಇವರೆಲ್ಲಾ ಡಿಸಿಪಿಯ ಸಹಿ ಹಾಗೂ ಸೀಲ್  ನಕಲು ಮಾಡಿ, ಪಾಸ್ ಸೃಷ್ಟಿಸಿ 500 ರೂ.ಗೆ ಮರಾಟ ಮಾಡುತ್ತಿದ್ದರು ಎನ್ನಲಾಗಿದೆ.ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯ ನಾಗವಾರ ಮುಖ್ಯ ರಸ್ತೆಯಲ್ಲಿ ಏಪ್ರಿಲ್  9ರಂದು ಪೊಲೀಸರು ಟೆಂಪೊ ವಾಹನವೊಂದನ್ನು ತಡೆದು ಪ್ರಶ್ನಿಸಿದ್ದರು. ಪರಿಶೀಲನೆ ವೇಳೆ  ವಾಹನದಲ್ಲಿ, ವೆಹಿಕಲ್​ ಪಾಸ್​​ನ ಕಲರ್ ಜೆರಾಕ್ಸ್ ಅಂಟಿಸಿಕೊಂಡು ಓಡಾಡುತ್ತಿದ್ದುದು  ಬೆಳಕಿಗೆ ಬಂದಿತ್ತು. ಈ ಬಗ್ಗೆ ಟೆಂಪೋ ಚಾಲಕನನ್ನು ವಿಚಾರಿಸಿದಾಗ ನದೀಂ ಪಾಷಾನಿಂದ ಕಲರ್  ಜೆರಾಕ್ಸ್ ಪಾಸ್ ಪಡೆದುಕೊಂಡಿರು ವುದಾಗಿ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ   ಪೊಲೀಸರು ಐವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.