ನವದೆಹಲಿ, ಜೂನ್ 26, ಭಾರತ ಮತ್ತು ಚೀನಾ ಪಡೆಗಳ ನಡುವೆ ಕಳೆದ ಮೇ ತಿಂಗಳ ಆರಂಭದಿಂದ ಸಂಘರ್ಷ ಎದುರಾಗಿರುವ ಪೂರ್ವ ಲಡಾಕ್‌ನ ವಾಸ್ತವ ಗಡಿ ನಿಯಂತ್ರಣಾ ರೇಖೆಯಲ್ಲಿ (ಎಲ್‌ಎಸಿ) ಭದ್ರತಾ ಪರಿಸ್ಥತಿಯ ಬಗ್ಗೆ ಅವಲೋಕಿಸಿದ ನಂತರ ಭೂಸೇನಾ ಮುಖ್ಯಸ್ಥ ಎಂ ಎಂ ನರಾವಣೆ ಅವರು ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಶುಕ್ರವಾರ ಮಾಹಿತಿ ನೀಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.ಎರಡನೇ ಮಹಾಯುದ್ಧದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಷ್ಯಾ ನಾಯಕತ್ವದೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿ ವಿಜಯ ದಿನ ಪೆರೇಡ್ ನಲ್ಲಿ ಭಾಗವಹಿಸಿದ ನಂತರ ರಾಜನಾಥ್ ಸಿಂಗ್ ರಷ್ಯಾದಿಂದ ವಾಪಸ್ಸಾಗಿದ್ದಾರೆ.
ಲಡಾಖ್‌ಗೆ 2 ದಿನಗಳ ಭೇಟಿ ನೀಡಿದ್ದ ನರಾವಣೆ, ಲೇಹ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಸೈನಿಕರ ಆರೋಗ್ಯ ವಿಚಾರಿಸಿದ್ದರು. ಗಡಿಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿ ಈ ಸೈನಿಕರು ಗಾಯಗೊಂಡಿದ್ದರು. ಜೂನ್ 15 ರಂದು ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯದೊಂದಿಗೆ ಹೋರಾಡಿದ ಸೈನಿಕರಿಗೆ ಸೇನಾ ಮುಖ್ಯಸ್ಥರು ಭೇಟಿಯ ವೇಳೆ ಪ್ರಶಂಸಿಸಿದ್ದಾರೆ. ಜೂನ್ 15 ರಂದು ನಡೆದ ಘರ್ಷಣೆಯಲ್ಲಿ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯಿಂದ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಚೀನಾದ ಕಡೆಯೂ ಹೆಚ್ಚು ಸಾವು-ನೋವು ಸಂಭವಿಸಿತ್ತು. ಆದರೆ, ಈ ಕುರಿತು ಚೀನಾ ಬಹಿರಂಗಪಡಿಸಿಲ್ಲ.
ಗಡಿ ಬಿಕ್ಕಟ್ಟಿನ ನಡುವೆ, ರಕ್ಷಣಾ ಒಪ್ಪಂದಗಳನ್ನು ಮುಂದುವರಿಸಲಾಗುವುದು ಎಂದು ರಷ್ಯಾ ಭಾರತಕ್ಕೆ ಭರವಸೆ ನೀಡಿದೆ. ರಷ್ಯಾದ ಅಧಿಕೃತ ಭೇಟಿಯಲ್ಲಿದ್ದ ರಾಜನಾಥ್ ಸಿಂಗ್ ಅವರಿಗೆ ರಷ್ಯಾದ ಕಡೆಯಿಂದ ಈ ಭರವಸೆ ನೀಡಲಾಗಿದೆ. ಭಾರತ-ರಷ್ಯಾ ಸಂಬಂಧಗಳನ್ನು ವಿಶಿಷ್ಟ ಮತ್ತು ಕಾರ್ಯತಂತ್ರದ ಸಹಭಾಗಿತ್ವ ಎಂದು ಬಣ್ಣಿಸಿರುವ ರಾಜನಾಥ್ ಸಿಂಗ್, ರಷ್ಯಾದ ಉಪ ಪ್ರಧಾನ ಮಂತ್ರಿ ಯೂರಿ ಬೊರಿಸೊವ್ ಅವರೊಂದಿಗಿನ ಮಾತುಕತೆಯಲ್ಲಿ ರಷ್ಯಾ ಜತೆಗಿನ ಭಾರತದ ರಕ್ಷಣಾ ಸಂಬಂಧ ಅತಿ ಪ್ರಮುಖವಾಗಿದೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
‘ಉಪ ಪ್ರಧಾನ ಮಂತ್ರಿ ಯೂರಿ ಬೊರಿಸೊವ್ ಅವರೊಂದಿಗೆ ರಕ್ಷಣಾ ಸಂಬಂಧ ಬಲಪಡಿಸುವ ಕುರಿತು ಚರ್ಚಿಸಲಾಗಿದೆ. ಮಾತುಕತೆಗಳು ಸಕಾರಾತ್ಮಕ ಮತ್ತು ಫಲಪ್ರದವಾಗಿದ್ದವು. ಭಾರತ ಜತೆಗಿನ ಈಗಿನ ಒಪ್ಪಂದಗಳನ್ನು ಮುಂದುವರಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಭಾರತದ ಎಲ್ಲಾ ಪ್ರಸ್ತಾಪಗಳಿಗೆ ರಷ್ಯಾದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಮಾತುಕತೆಗಳ ಬಗ್ಗೆ ಸಂಪೂರ್ಣ ತೃಪ್ತಿಯಿದೆ.’ ಎಂದು ರಾಜನಾಥ್‍ಸಿಂಗ್ ಮಾಸ್ಕೋದಲ್ಲಿ ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದಲ್ಲಿ ತಿಳಿಸಿದ್ದಾರೆ.