ಅರಿ ವರ್ಕ್‌ ತರಬೇತಿ ಶಿಬಿರ ಸಮಾರೋಪ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕರೆ

ಅರಿ ವರ್ಕ್‌ ತರಬೇತಿ ಶಿಬಿರ ಸಮಾರೋಪ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕರೆ  Ari Work Training Camp concludes: Women urged to build self-reliant lives

ಬೈಲಹೊಂಗಲ 08 : ಜ್ಞಾನವಿಕಾಸ ವತಿಯಿಂದ, ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆ ಅವರ ಕೃಪಾಶೀರ್ವಾದದೊಂದಿಗೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಕೆಂಗಾನೂರು ವಲಯದ ಅಮಟೂರು ಕಾರ್ಯಕ್ಷೇತ್ರದ   ಭಾರತಾಂಬೆ ಜ್ಞಾನವಿಕಾಸ ಕೇಂದ್ರದಲ್ಲಿ ಆಯೋಜಿಸಿದ್ದ ಅರಿ ವರ್ಕ್‌ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು.  ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಮಿತ್ರಾ, ತಾಲೂಕು ಯೋಜನಾಧಿಕಾರಿ ವಿಜಯಕುಮಾರ, ಗ್ರಾಮದ ಗಣ್ಯರಾದ ದುಂಡಪ್ಪ ಕಾಲ್ಗಗರಿ, ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ  ಜಯಶ್ರೀ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ ಹಾಗೂ ತರಬೇತಿ ಶಿಕ್ಷಕಿ ಆಶಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ವಿಜಯಕುಮಾರ, ಅರಿ ವರ್ಕ್‌ ತರಬೇತಿ ಪಡೆದ ಮಹಿಳೆಯರು ತರಬೇತಿಯನ್ನು ಸ್ವಉದ್ಯೋಗವಾಗಿ ರೂಪಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಗ್ರಾಮೀಣ ಭಾಗದ ಮಹಿಳೆಯರಿಗೆ ಇಂತಹ ತರಬೇತಿಗಳು ಸ್ವಂತ ಉದ್ಯೋಗ ಆರಂಭಿಸಿ ಕುಟುಂಬದ ಆರ್ಥಿಕ ಪ್ರಗತಿಗೆ ಕೈಜೋಡಿಸಲು ಸಹಕಾರಿಯಾಗುತ್ತವೆ. ಮುಂದಿನ ದಿನಗಳಲ್ಲಿ ಎಂಬ್ರಾಯ್ಡರಿ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಕಲಿತು, ಯಂತ್ರೋಪಕರಣಗಳ ಬಳಕೆಯ ಮೂಲಕ ದೊಡ್ಡ ಪ್ರಮಾಣದ ಸ್ವಉದ್ಯೋಗ ಘಟಕಗಳನ್ನು ಆರಂಭಿಸುವಂತಾಗಲಿ ಎಂದು ಶುಭ ಹಾರೈಸಿದರು. 

ತರಬೇತಿ ಪಡೆದ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಗಣ್ಯರಾದ ದುಂಡಪ್ಪ ಕಾಲ್ಗಗರಿ ಮಾತನಾಡಿ, ಗ್ರಾಮದಲ್ಲಿಯೇ ಮಹಿಳೆಯರ ಮನೆ ಬಾಗಿಲಿಗೆ ಇಂತಹ ತರಬೇತಿ ಹಾಗೂ ಸೌಲಭ್ಯಗಳು ದೊರೆತಿರುವುದು ಸಂತಸದ ಸಂಗತಿ. ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಸ್ವಉದ್ಯೋಗ ಆರಂಭಿಸಿ ಕುಟುಂಬದ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.  ಅರಿ ವರ್ಕ್‌ ತರಬೇತಿ ಶಿಕ್ಷಕಿ ಆಶಾ ಅವರು ತರಬೇತಿಯ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ ನಿರೂಪಿಸಿದರು. ಸೇವಾಪ್ರತಿನಿಧಿ ಕುಮಾರಿ ಐಶ್ವರ್ಯ ಸ್ವಾಗತಿಸಿದರು. ಕೇಂದ್ರದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.