ಅಥಣಿಯ ರಾಯರ ಮಠದಲ್ಲಿ ವಿಜ್ರಂಭಣೆಯ ಆರಾಧನಾ ಮಹೋತ್ಸವ

ಅಥಣಿಯ ರಾಯರ ಮಠದಲ್ಲಿ ವಿಜ್ರಂಭಣೆಯ ಆರಾಧನಾ ಮಹೋತ್ಸವ Aradhana Mahotsav: Athani news

ವರದಿ: ವೆಂಕಟೇಶ ದೇಶಪಾಂಡೆ. 

ಅಥಣಿ 09: ಅಭಿನವ ಮಂತ್ರಾಲಯ ಎಂದೇ ಪ್ರಸಿದ್ಧಿಯಾದ ಅಥಣಿ ಶ್ರೀ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವ ಅಗಸ್ಟ 10 ಭಾನುವಾರ, 11 ಸೋಮವಾರ ಮತ್ತು 12 ಮಂಗಳವಾರದಂದು ಈ ಮೂರು ದಿನ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಜರುಗಲಿದೆ.         

ದಿ.ಭೀಮದಾಸರಿಂದ ಸ್ಥಾಪಿತವಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವನ್ನು ಉತ್ತರಾಧಿ ಮಠದ ಶ್ರೀ ಸತ್ಯಪ್ರಮೋದ ತೀರ್ಥರಿಂದ ಪುನಃ ಪ್ರತಿಷ್ಢಾಪಿಸ್ಪಟ್ಟಿದ್ದರು ಮತ್ತು ಶ್ರೀ ರಾಯರ ಮಠದ ನವೀಕರಣವನ್ನು ಉತ್ತರಾಧಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಉದ್ಘಾಟಿಸಿದ  ಈ  ಮಠದಲ್ಲಿ ಸುಮಾರು 50 ವರ್ಷಗಳಿಂದಲೂ ಶ್ರೀ ರಾಯರ ಆರಾಧನೆಯನ್ನು ವಿಜ್ರಂಭಣೆಯಿಂದ ಆಚರಿಸಿಕೊಂಡು ಬಂದಿದ್ದಾರೆ.        ಶ್ರೀ ಮಠದ ಸಂಸ್ಥಾಪಕರಾದ ಅಥಣಿಯವರೇ ಆಗಿದ್ದ ದಿ.ಭೀಮದಾಸ್ ಹೂಗಾರ ನಾಟಕ ಕಲಾವಿದರಾಗಿದ್ದರು. ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದ ಇವರು ರಾಜ್ಯಾದ್ಯಂತ ತಮ್ಮ ನಾಟಕ ಕಂಪನಿಯ ಮೂಲಕ ಧಾರ್ಮಿಕ, ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿ ಜನರನ್ನು ರಂಜಿಸುತ್ತಿದ್ದ ಇವರ ಕನಸಿನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನವಾಯಿತು ಅಂದಿನಿಂದಲೇ ತಮ್ಮ ವೃತ್ತಿಯಿಂದ ಹೊರ ಬಂದು ರಾಯರ ದಾಸರಾಗಿ ಮುಂದೆ ಅವರೇ ಭೀಮದಾಸರಾದರು.        

ಕನಸಿನಲ್ಲಾದ ದೃಷ್ಟಾಂತದಂತೆ ಭೀಮದಾಸರು ಮಂತ್ರಾಲಯಕ್ಕೆ ತೆರಳಿ ಅಲ್ಲಿ ಕೆಲ ದಿನ ಇದ್ದು ಅಲ್ಲಿಂದಲೇ ಮೃತ್ತಿಕೆ ತಂದು ಅಥಣಿಯಲ್ಲಿ ರಾಯರ ವೃಂದಾವನ ಸ್ಥಾಪಿಸಿ ಮನೆ ಮನೆಗೆ ಕೈಯಲ್ಲಿ ತಂಬೂರಿ ಹಿಡಿದು ದಾಸರ ಪದಗಳನ್ನು ಹಾಡುತ್ತ ರಾಯರ ಅರಾಧನಾ ಮಹೋತ್ಸವ ಕೆಲ ವರ್ಷಗಳವರೆಗೆ ಆಚರಿಸಿದರು ನಂತರ ಅಥಣಿಯ ಜನ ಮುಂದಾಗಿ ರಾಘವೇಂದ್ರ ಸ್ವಾಮಿಗಳ ಮಠ ಸ್ಥಾಪಿಸಿದರು ಅಂದಿನಿಂದ ಇಲ್ಲಿಯವರೆಗೂ ನಿರಂತರವಾಗಿ ರಾಯರ ಆರಾಧನಾ ಮಹೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದೆ.         

ಆರಾಧನಾ ಮಹೋತ್ಸವದ ಮೊದಲ ದಿನ ಅಗಸ್ಟ 10 ರಂದು ಪ್ರಾತಃಕಾಲ ಹಲ್ಯಾಳದ ಕೃಷ್ಣಾ ನದಿಯಿಂದ ತರುಣ ಭಕ್ತರು ಪಾದತಾತ್ರೆ ಮೂಲಕ ಕೃಷ್ಣ ವೇಣಿ ಜಲವನ್ನು ವೃಂದಾವನ ಪೂಜೆಗಾಗಿ ತರುತ್ತಾರೆ.  ಈ ಮೂರೂ ದಿನ ಮುಂಜಾನೆ 4 ಗಂಟೆಗೆ ಸುಪ್ರಭಾತ, ಗೀತ ಸೇವೆ, 8 ಗಂಟೆಯಿಂದ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಪೂಜೆ, 9 ಗಂಟೆಯಿಂದ ಪುರಾಣ, ಶ್ರೀ ರಾಯರ ಸ್ತೋತ್ರದ ಅರ್ಥಾನುಸಾರ, ಮಧ್ಯಾಹ್ನ 12 ರಿಂದ 1 ಗಂಟೆವರೆಗೆ ಸ್ಥಳೀಯ ಕಲಾವಿದರಿಂದ ಗಾಯನ ಮತ್ತು ಭಜನೆ, ಮಧ್ಯಾಹ್ನ 12  ರಿಂದ 3 ಗಂಟೆಯವರೆಗೆ ಪ್ರಸಾದ ವಿತರಣೆ, ಸಾಯಂಕಾಲ ತಾರತಮ್ಯ ಭಜನೆ, ಪಲ್ಲಕ್ಕಿ ಸೇವೆ ಮತ್ತು ಭಜನೆ  ರಾತ್ರಿ ಮಂತ್ರ ಪುಷ್ಪ ಜರಗುವುದು.            

ಆಗಸ್ಟ 10 ರಂದು ಸಾಯಂಕಾಲ 6 ಗಂಟೆಗೆ ಬೆಂಗಳೂರಿನ ಶ್ರೀಮತಿ ಅನುರಾಧಾ ಎ. ಇವರಿಂದ ಸಂಗೀತ, ಸೋಮವಾರ 11 ರಂದು ಸಾಯಂಕಾಲ 6 ಗಂಟೆಗೆ ಹುಬ್ಬಳ್ಳಿಯ ಕೃತಿಕಾ ನಾಯಿಕ, ಧಾರವಾಡದ ವಿದೂಷಿ ಗೀತಾ ಆಲೂರ ಇವರಿಂದ ಸಂಗೀತ ಹಾಗೂ ಕೊನೆಯ ದಿನ ಆಗಸ್ಟ 12 ರಂದು ರಾಯಚೂರಿನ ಖ್ಯಾತ ಸಂಗೀತಗಾರ ಶೇಷಗಿರಿ ದಾಸ ರಿಂದ ಸಂಗೀತ ಕಾರ್ಯಕ್ರಮ ಮತ್ತು ಆರಾಧನಾ ಮಹೋತ್ಸವದ ಕೊನೆಯ ದಿನ ಆಗಸ್ಟ 12 ಮಂಗಳವಾರದಂದು ಮುಂಜಾನೆ 11 ಗಂಟೆಗೆ ರಥೋತ್ಸವ ವಿಜ್ರಂಭಣೆಯಿಂದ ಜರುಗಲಿದೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಮಠ ಸೇವಾ ಸಮಿತಿ ಅಧ್ಯಕ್ಷ ಅನೀಲ ದೇಶಪಾಂಡೆ (ಹಿಡಕಲ್) ತಿಳಿಸಿದ್ದಾರೆ.   

ಶ್ರೀ ರಾಘವೇಂದ್ರ ಸ್ವಾಮಿ ಮಠದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾಗಿ ಅನೀಲ ದೇಶಪಾಂಡೆ (ಸರಾಫ), ಕಾರ್ಯದರ್ಶಿ ಎಮ್‌.ಬಿ. ಹೂಗಾರ, ಉಪಾಧ್ಯಕ್ಷ ಎಸ್‌.ವಿ.ಜೋಶಿ, ಸದಸ್ಯರಾದ ಎಲ್‌.ವ್ಹಿ.ಕುಲಕರ್ಣಿ, ರಾಜು ಪಾಟೀಲ,  ಗೋಪಾಲ ಪಾಟೀಲ, ಶ್ರೀನಿವಾಸಾಚಾರ್ಯ ಜೋಶಿ ಶ್ರೀಮಠದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.